ದುಬೈ: ಭಾರತ ತಂಡ ಭಾರತ ತಂಡ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬುಧವಾರ 82 ರನ್ಗಳ ಜಯ ಸಾಧಿಸಿತು.ಸ್ಮೃತಿ ಮಂದಾನ (50;38ಎ) ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ (ಔಟಾಗದೇ 52;27ಎ) ಅವರ ಅರ್ಧಶತಕ ಹಾಗೂ ಬೌಲರ್ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ
ಸುಲಭ ಜಯ ದಾಖಲಿಸಿತು.ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಶಫಾಲಿ ವರ್ಮಾ (43, 40 ಎಸೆತ) ಮತ್ತು ಮಂದಾನ 12.4 ಓವರುಗಳಲ್ಲಿ 98 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು.
ಹರ್ಮನ್ಪ್ರೀತ್ ಉತ್ತಮ ಬ್ಯಾಟಿಂಗ್ ಮಾಡಿದ ಪರಿಣಾಮ ಭಾರತ 3 ವಿಕೆಟ್ಗೆ 172 ರನ್ಗಳ ಉತ್ತಮ ಮೊತ್ತ ಗಳಿಸಿತು. ಗುರಿ ಬೆನ್ನತ್ತಿದ ಲಂಕಾ ತಂಡಕ್ಕೆ ರೇಣುಕಾ ಸಿಂಗ್ (16ಕ್ಕೆ 2) ಮತ್ತು ಶ್ರೇಯಾಂಕಾ ಪಾಟೀಲ (15ಕ್ಕೆ 1) ಆರಂಭದಲ್ಲೇ ಪೆಟ್ಟು ನೀಡಿದರು. ತಂಡವು 6 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದು ಕೊಂಡಿತು. ನಂತರ ಬಂದ ಕವಿಶಾ ದಿಲ್ಹಾರಿ (21) ಮತ್ತು ಅನುಷ್ಕಾ ಸಂಜೀವನಿ (20) ಕೊಂಚ ಪ್ರತಿರೋಧ ತೋರಿದರೆ, ಉಳಿದವರು ನಿರಾಸೆ ಮೂಡಿಸಿದರು. ಅರುಂಧತಿ ರೆಡ್ಡಿ ಮತ್ತು ಆಶಾ ಸೋಭಾನ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಮೂರು ಪಂದ್ಯಗಳ ಪೈಕಿ ಸತತ ಎರಡರಲ್ಲಿ ಗೆದ್ದು ನಾಲ್ಕು ಅಂಕ ಗಳಿಸಿರುವ ಭಾರತ, ‘ಎ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಎರಡೂ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಲಂಕಾ ತಂಡ ಮೂರೂ ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ.