ಸುಳ್ಯ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹೆರಿಗೆ ವಾರ್ಡ್ , ಮಹಿಳಾ ವಾರ್ಡ್ಗೆ ಭೇಟಿ ನೀಡಿದ ಅವರು ಹೆರಿಗೆ ವಾರ್ಡ್ ಹಾಗೂ ಮಹಿಳಾ ವಾರ್ಡ್ಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ರೋಗಿಗಳ ಜೊತೆ
ಮಾತುಕತೆ ನಡೆಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ವಿ.ಕರುಣಾಕರ ಅವರು ಅಸ್ಪತ್ರೆಯ ಕಾರ್ಯ ಚಟುವಟಿಜೆಯ ಬಗ್ಗೆ ವಿವರಿಸಿದರು. 7 ವರ್ಷದಿಂದ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಹುದ್ದೆ ಖಾಲಿ ಇರುವ ಬಗ್ಗೆ ಗಮನ ಸೆಳೆಯಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಹೆರಿಗೆ ತಜ್ಞರ ನೇಮಕಕ್ಕೆ ಕ್ರಮ:
ಸಾರ್ವಜನಿಕ ಆಸ್ಪತ್ರೆಯ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ನಾಗಲಕ್ಷ್ಮಿ ಚೌಧರಿ ಅವರು ಆಸ್ಪತ್ರೆಗೆ ಹೆರಿಗೆ ತಜ್ಞರ ನೇಮಕಕ್ಕೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸುತ್ತೇನೆ ಎಂದು ಅವರು ಹೇಳಿದರು.
ಪೊಲೀಸ್ ಉಪನಿರೀಕ್ಷಕಿ ಸರಸ್ವತಿ ಹಾಗೂ ಸಿಬ್ಬಂದಿಗಳು, ಸರಕಾರಿ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.