
ದೋಹಾ: ಕತಾರ್ನ ಸಾಂಸ್ಕೃತಿಕ ವೈಭವ ಜಗತ್ತಿನ ಮುಂದೆ ತೆರೆದಿಟ್ಟ ವರ್ಣವರಂಜಿತ ಸಮಾರಂಭದೊಂದಿಗೆ 22ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಭಾನುವಾರ ರಾತ್ರಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಮಾರಂಭದಲ್ಲಿ ಕತಾರ್ನ ಸಾಂಸ್ಕೃತಿಕ ಪರಂಪರೆಯೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯ
ಅನಾವರಣ ಮೂಲಕ ಫುಟ್ಬಾಲ್ ಹಬ್ಬಕ್ಕೆ ಅದ್ದೂರಿ ಚಾಲನೆ ದೊರಕಿತು.
ಕಲಾವಿದರ ಆಕರ್ಷಕ ನೃತ್ಯ , ಐದು ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ ಅಮೆರಿಕದ ಹಿರಿಯ ನಟ ಮಾರ್ಗನ್ ಫ್ರೀಮನ್ ಅವರ ವಾಯ್ಸ್ ಓವರ್ ವಿಡಿಯೋ ಕಾರ್ಯಕ್ರಮಕ್ಕೆ ಮೆರಗು ನೀಡಿತು. 2010ರ ವಿಶ್ವಕಪ್ನ ಪ್ರಖ್ಯಾತ ಧ್ಯೇಯಗೀತೆ, ವಾಕಾ ಹಾಗೂ ಈ ಬಾರಿಯ ವಿಶ್ವಕಪ್ನ ಧ್ಯೇಯಗೀತೆ ಫೀಲ್ದ ಮ್ಯಾಜಿಕ್ ಇನ್ದ ಏರ್ ಹಾಡನ್ನು ಮಿಶ್ರಣ ಮಾಡಿ ಅದ್ಭುತ ನೃತ್ಯವನ್ನು ಕಲಾವಿದರು ಪ್ರಸ್ತುತ ಪಡಿಸಿದರು.ಈ ವೇಳೆ ಎಲ್ಲಾ ದೇಶಗಳ ಧ್ವಜಗಳನ್ನು ಕಲಾವಿದರು ಹಾರಿಸುತ್ತಾ ವೇದಿಕೆಯಲ್ಲಿ ನಡೆದರು. ಅತಿಥೇಯ ಕತಾರ್ ಹಾಗು ಇಕ್ವಡೋರ್ ಮಧ್ಯೆ ಈ ವಿಶ್ವಕಫ್ನ ಮೊದಲ ಪಂದ್ಯಕ್ಕೆ ವಿಸಿಲ್ ಮೊಳಗಿತು.