ಸುಳ್ಯ: ಅಜ್ಜಾವರ ಗ್ರಾಮ, ಮಂಡೆಕೋಲು ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಅಜ್ಜಾವರ ಗ್ರಾಮದ ಡೆಂಜಿಗುರಿ, ಅಡ್ಪಂಗಾಯ ಬಳಿ ರಾತ್ರಿಯ ವೇಳೆಗೆ ಆನೆಗಳ ಹಿಂಡು ಬೀಡು ಬಿಟ್ಟಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಮತ್ತು ಸಂಜೆಯ
ವೇಳೆಗೆ ಅಜ್ಜಾವರ ಮತ್ತು ಮಂಡೆಕೋಲಿನ ಗಡಿಭಾಗವಾದ ಡೆಂಜಿಗುರಿಯಲ್ಲಿ ಕಾಡಾನೆಗಳ ಹಿಂಡು ರಸ್ತೆಯಲ್ಲಿ ಕಂಡು ಬಂದಿತ್ತು. ರಸ್ತೆಯಲ್ಲಿಯೇ ಕಾಡಾನೆಗಳು ಸಂಚರಿಸುವುದು ಕಂಡು ಬಂದಿದೆ.
ಆನೆಗಳ ಹಿಂಡು ಅಡ್ಪಂಗಾಯ ಭಾಗದ ಜನವಸತಿ ಪ್ರದೇಶದ ಬಳಿಯಲ್ಲಿಯೇ ಬೀಡು ಬಿಟ್ಟಿದ್ದು ಕೃಷಿಕರ ತೋಟಕ್ಕೆ ದಾಳಿ ಮಾಡುವ ಆತಂಕ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 7-8 ಆನೆಗಳು ಹಿಂಡಿನಲ್ಲಿ ಇರುವ ಶಂಕೆ ವ್ಯಕ್ತವಾಗಿದೆ.