*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಇತ್ತೀಚಿನ ವರ್ಷಗಳಲ್ಲಿ ಕಾಡು ಕೋಣಗಳ ಕಾರು ಬಾರು ನಾಡಿನಲ್ಲಿ ಅಧಿಕವಾಗಿದ್ದು ಮನೆಯಂಗಳಕ್ಕೂ ಕಾಡು ಕೋಣಗಳು ಲಗ್ಗೆಯಿಡುತ್ತಿವೆ. ಜಾಲ್ಸೂರು ಗ್ರಾಮದ ಬೊಳು ಬೈಲು ಸಮೀಪದ ಕಾಟೂರು ಭಾಗದಲ್ಲಿ ಕಾಡುಕೋಣಗಳ ಉಪಟಳ ಅಧಿಕವಾಗಿದೆ. ಬೆಳಿಗ್ಗೆ ಎದ್ದು ಅಂಗಳಕ್ಕೆ, ಅಡಿಕೆ ತೋಟಕ್ಕೆ, ರಬ್ಬರ್ ತೋಟಕ್ಕೆ ಇಳಿಯುತ್ತಿದ್ದಂತೆ ಕಾಡು ಕೋಣಗಳು ಪ್ರತ್ಯಕ್ಷವಾಗುತ್ತದೆ. ಮನೆಯಲ್ಲಿ ಸಾಕಿದ ಜಾನುವಾರುಗಳಂತೆ ನಿರ್ಭಯವಾಗಿ, ಆರಾಮವಾಗಿ ಸುತ್ತಾಡಿ ಹುಲ್ಲು ಮೇಯುತ್ತಾ ಇರುತ್ತವೆ. ಸ್ಥಳೀಯವಾಗಿ ಇವುಗಳನ್ನು ‘ಕಾಟಿಗಳು’ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಒಂದು, ಎರಡು ಕಾಣಿಸಿ ಕೊಂಡರೆ ,
ಸುಳ್ಯ ಬೊಳುಬೈಲು ಸಮೀಪ ಕಾಟೂರು ಭಾಗದಲ್ಲಿ ಕಂಡು ಬಂದ ಕಾಡು ಕೋಣ
The Sullia Mirror YouTube channel
Pkease Watch and Subscribe
Video By: ಸತೀಶ್ ಕಾಟೂರು
ಕೆಲವೊಮ್ಮೆ ಹಿಂಡು ಹಿಂಡಾಗಿ ಕಾಣಿಸಿ ಕೊಳ್ಳುತ್ತವೆ. ಕಾಟೂರು ಭಾಗದಲ್ಲಿ ಹಲವು ವರ್ಷಗಳಿಂದ ಕಾಡು ಕೋಣಗಳ ಉಪಟಳ ಕಂಡು ಬರುತಿದೆ ಎಂದು ಕೃಷಿಕರು ಹೇಳುತ್ತಾರೆ. ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಕಾಡುಕೋಣಗಳ ಕಾರು ಬಾರು ಈಗ ನಾಡಿನಲ್ಲಿಯೂ ಅಧಿಕವಾಗುತಿದೆ. ಸುಳ್ಯ ತಾಲೂಕಿನಲ್ಲಿ ವಿವಿಧ ಭಾಗಗಳಲ್ಲಿ ಕಾಡುಕೋಣಗಳ ಉಪಟಳ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಆನೆ, ಮಂಗ, ಕಾಡು ಹಂದಿ ಹೀಗೆ ಹಲವು ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ಕೃಷಿಕರಿಗೆ ಕಾಡುಕೋಣವೂ ಸಣ್ಣ ಮಟ್ಟಿನ ತಲೆ ನೋವನ್ನು ನೀಡುತಿದೆ. ಸುಳ್ಯ ತಾಲೂಕಿನ ಕಾಡಂಚಿನಲ್ಲಿರುವ ವಿವಿಧ ಗ್ರಾಮಗಳಲ್ಲಿ ಕಾಡು ಕೋಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ ಪೂಮಲೆ ತಪ್ಪಲಿನಲ್ಲಿರುವ ಉಬರಡ್ಕ ಮಿತ್ತೂರು, ಸುಳ್ಯ ನಗರ ಸಮೀಪದಲ್ಲೇ ಇರುವ

ಕಾಯರ್ತೋಡಿ, ಕಾಟೂರು ಪ್ರದೇಶಗಳಲ್ಲಿ ಈಗ ಕಾಡು ಕೋಣಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ.ಪಂಜ, ಹರಿಹರ, ಬಾಳುಗೋಡು, ಮರ್ಕಂಜ, ಕಲ್ಮಕಾರು, ಕನಕಮಜಲು, ಬೇಂಗಮಲೆ ಹೀಗೆ ತಾಲೂಕಿನ ಹಲವು ಭಾಗಗಳಲ್ಲಿ ಕಾಡು ಕೋಣಗಳು ಆಗಿಂದಾಗ ಕಾಣಿಸಿಕೊಳ್ಳುತ್ತದೆ. ಕಾಡಿನಿಂದ ಆಹಾರ ಅರಸಿ ಇವು ನಾಡಿನೆಡೆಗೆ ದಾಂಗುಡಿಯಿಡುತ್ತವೆ.
ಕೋಣಗಳ ಕಾರು ಬಾರು ಏನು..?
ಆನೆ ಮತ್ತಿತರ ಪ್ರಾಣಿಗಳಿಗೆ ಹೋಲಿಸಿದರೆ ಕಾಡುಕೋಣ ಅಸ್ಟೊಂದು ಆಕ್ರಮಣಕಾರಿಯಲ್ಲ.ಹುಲ್ಲನ್ನು ಮೇಯುವ ಕೋಣಗಳು ಅಡಕೆ ತೋಟಗಳಿಗೆ ನುಗ್ಗಿ ಹುಲ್ಲು, ಅಡಕೆಯ ಹಾಳೆಗಳನ್ನು ಹೆಚ್ಚಾಗಿ ತಿನ್ನುತ್ತದೆ. ತೋಟಕ್ಕೆ ನುಗ್ಗಿದ ಕೋಣಗಳು, ಚಿಕ್ಕ ಅಡಕೆ ಗಿಡ, ಬಾಳೆ, ಕೊಕ್ಕೊ ಗಿಡಗಳನ್ನು ನಾಶ ಮಾಡುವುದರ ಜೊತೆಗೆ ನೀರಿನ ಪೈಪ್ಗಳನ್ನು, ನೀರು ಹಾಯಿಸುವ ಜೆಟ್ಗಳನ್ನು ಪುಡಿಗಟ್ಟುತ್ತದೆ.ಕೋಣಗಳ ಹೆಜ್ಜೆಗೆ ಸಿಲುಕಿ ತೋಟವೇ ಪುಡಿ ಪುಡಿಯಾಗುತ್ತದೆ. ತೋಟಗಳ ಬೇಲಿಯನ್ನು ಮುರಿದು ಹಾಕುವುದರಿಂದ ದನ ಮತ್ತಿತರ ಪ್ರಾಣಿಗಳು ಆರಾಮವಾಗಿ ತೋಟಕ್ಕೆ ಬರಲು ರಹದಾರಿಯನ್ನೊದಗಿಸುತ್ತದೆ. ಮನೆಯ ಅಂಗಳದವರೆಗೂ ಬರುವ ಕೋಣಗಳು ಕೃಷಿಕರು ಮಾಡಿದ ಬೆಂಡೆ, ಅಲಸಂಡೆ ಮತ್ತಿತರ ತರಕಾರಿ, ಹೂವಿನ ಗಿಡಗಳನ್ನು ತಿನ್ನುತ್ತದೆ. ದಾಸವಾಳ ಹೂವಿನ ಗಿಡವೆಂದರೆ ಇವುಗಳಿಗೆ ಅಚ್ಚು ಮೆಚ್ಚು.

ದೂರ ಹೋಗಲ್ಲ-ಕಾಡಂಚಿನಲ್ಲೇ ವಾಸ:
ಕಾಡಿನ ತುಂಬಾ ಒಳಗೆ ಹೆಚ್ಚಾಗಿ ಕಾಣಿಸಿಕೊಳ್ಳದ ಕಾಡು ಕೋಣ, ಕಾಡೆಮ್ಮೆಗಳು ಗ್ರಾಮಗಳ ಗಡಿಯ ಕಾಡಂಚಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಒಂದೊಂದೇ ಕಾಣಿಸಿಕೊಂಡರೆ ಕೆಲವು ಬಾರಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತದೆ. ಮರಿ ಇರುವ ಸಂದರ್ಭದಲ್ಲಿ ಕೋಣ, ಎಮ್ಮೆ ಮತ್ತು ಮತ್ತು ಮರಿ ಒಟ್ಟಾಗಿ ಓಡಾಡುತ್ತವೆ. ಕೆಲವೊಮ್ಮೆ 10-12 ಇರುವ ಹಿಂಡು ಕಂಡು ಬಂದದ್ದೂ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಹಿಂದೆ ಕಾಡು ಪ್ರಾಣಿಗಳ ಗಣತಿ ನಡೆಸಿದ ಸಂದರ್ಭದಲ್ಲಿ ಕಾಡುಕೋಣಗಳ ಗಣತಿಯನ್ನೂ ನಡೆಸಲಾಗಿತ್ತು. ಇವುಗಳ ಸಂಖ್ಯೆ ನಿಖರವಾಗಿ ಸಿಗದಿದ್ದರೂ ಸುಳ್ಯ ತಾಲೂಕಿನ ಬಹುತೇಕ ಎಲ್ಲಾ ಅರಣ್ಯಗಳಲ್ಲಿಯೂ ಕಾಡುಕೋಣಗಳ ಇರುವಿಕೆಯನ್ನು ಗುರುತಿಸಲಾಗಿತ್ತು.
ಸೂಕ್ಷ್ಮ ಪ್ರಾಣಿ:
ಕಾಡುಕೋಣಗಳು ಸೂಕ್ಷ್ಮ ಪ್ರಾಣಿ. ಪರಿಸರವನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಿಕೊಂಡೇ ಓಡಾಡುತ್ತದೆ. ರಸ್ತೆ ಬದಿ, ಜನವಸತಿ ಪ್ರದೇಶಗಳಲ್ಲಿ ಪದೇ ಪದೇ ಕಂಡು ಬಂದರೂ ಜನರ ಮತ್ತು ಇತರ ಪ್ರಾಣಿಗಳ ಚಲನವಲನವನ್ನು ವೀಕ್ಷಿಸಿ ಓಡಾಡುತ್ತವೆ. ವಾಹನಗಳ ಓಡಾಟ ಇಲ್ಲ ಎಂದು ಖಚಿತಪಡಿಸಿದ ಮೇಲಷ್ಟೇ ರಸ್ತೆ ದಾಟುತ್ತದೆ ಮತ್ತು ವೇಗವಾಗಿ ಓಡಿ ರಸ್ತೆಯನ್ನು ಕ್ರಮಿಸುತ್ತದೆ. ಆದುದರಿಂದಲೇ ಮುಂಜಾಗೃತಾ ಕ್ರಮವಾಗಿ ಕಾಡು ಕೋಣ ಮತ್ತಿತರ ಪ್ರಾಣಿಗಳ ಓಡಾಟ ಇರುವ ಪ್ರದೇಶಗಳಲ್ಲಿ ವಾಹನಗಳನ್ನು ನಿಧಾನವಾಗಿ ಚಲಾಯಿಸುವಂತೆ ಸೂಚನಾ ಫಲಕಗಳನ್ನು ಅರಣ್ಯ ಇಲಾಖೆ ಅಳವಡಿಸುವುದೂ ಇದೆ.
” ಕಾಟೂರು ಭಾಗದಲದಲ್ಲಿ ಕಾಡು ಕೋಣಗಳ ಹಾವಳಿ ನಿರಂತರ ಇದೆ. ಕಳೆದ ಅನೇಕ ವರ್ಷಗಳಿಂದ ಇಲ್ಲಿ ಕಾಡು ಕೋಣಗಳು ಹಿಂಡು ಹಿಂಡಾಗಿ ಕಾಣಿಸಿ ಕೊಳ್ಳುತ್ತವೆ. ಇದರಿಂದ ಸಣ್ಣ ಪುಟ್ಟ ಉಪಟಳಗಳು ಇದ್ದೇ ಇರುತ್ತದೆ. ಜೊತೆಗೆ ಈ ಭಾಗದಲ್ಲಿ ಕಾಡು ಹಂದಿಗಳ ಉಪಟಳವೂ ಅಧಿಕವಾಗಿದೆ’. ಕಾಡು ಹಂದಿಗಳೂ ಕೃಷಿಗೆ ವ್ಯಾಪಕ ಹಾನಿ ಮಾಡುತಿದೆ’
-ಸತೀಶ್ ಕಾಟೂರು.