ಅಡ್ಕಾರ್: ಇತ್ತಿಚೆಗೆ ಅಗಲಿದ ರತನ್ ಟಾಟಾ ಅವರಿಗೆ ನಮನ ಸಲ್ಲಿಸುವ ಮೂಲಕ ಅಡ್ಕಾರಿನ ವೈಫೈ ಗೆಳೆಯರ ಬಳಗ ದೀಪಾವಳಿ ಸಂದರ್ಭ ತಯಾರಿಸಿದ ನ್ಯಾನೋ ಕಾರಿನ ಮಾದರಿಯ ವಿನೂತನ ಗೂಡುದೀಪ ವಿಶೇಷ ಗಮನ ಸೆಳೆದಿದೆ. ದೀಪಾವಳಿಗೆ ಪ್ರತೀ ವರುಷ ಹೊಸತನದ ಪರಿಕಲ್ಪನೆಯೊಂದಿಗೆ ಗೂಡುದೀಪ ಮಾಡುತ್ತಿರುವ ವೈಫೈ ಗೆಳೆಯರ ಬಳಗ ಈ ವರುಷ ತಯಾರಿಸಿದ
ವಿನೂತನ ಶೈಲಿಯ ಗೂಡುದೀಪವೂ ಮನ ಸೆಳೆಯುತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಗಲಿದ ರತನ್ ಟಾಟಾ ಅವರು ದೇಶಕ್ಕೆ, ಸಮಾಜಕ್ಕೆ ನೀಡಿದ ಅದ್ಭುತ ಕೊಡುಗೆಯನ್ನು ಸ್ಮರಿಸಿ ಗೂಡುದೀಪದ ಮೂಲಕ ನಮನ ಸಲ್ಲಿಸಲಾಗಿದೆ. ಜನಸಾಮಾನ್ಯರು ಕೂಡ ಕಾರಿನಲ್ಲಿ ಓಡಾಡಬೇಕು ಎಂಬ ಕಲ್ಪನೆಯಲ್ಲಿ ರತನ್ ಟಾಟಾ ಅವರು ಹೊರ ತಂದ
‘ನ್ಯಾನೋ ಕಾರಿನ’ ಮಾದರಿಯ ಗೂಡುದೀಪ ತಯಾರಿಸಿ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿ ಬದಿ ಅಡ್ಕಾರ್ ತೂಗು ಹಾಕಲಾಗಿದೆ. ನ್ಯಾನೋ ಕಾರಿನ ಮಾದರಿಯ ಗೂಡುದೀಪ ನೋಡುಗರ ಕಣ್ಮನ ಸೆಳೆಯುತ್ತಿದೆ. ಕಳೆದ ಬಾರಿ ‘ಚಂದ್ರಯಾನ’ ಮಾದರಿಯ ಗೂಡುದೀಪ ತಯಾರಿಸಿ ವಿಶೇಷ ಗಮನ ಸೆಳೆದಿತ್ತು.