ಸುಳ್ಯ:ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯ ತಾಣ, ನಮ್ಮ ಬದುಕಿನ ಆಸರೆ.ಅದರ ಉಳಿವು ನಮ್ಮೆಲ್ಲರ ಹೊಣೆ ಎಂದು ಖ್ಯಾತ ಪರಿಸರವಾದಿ, ಚಿತ್ರಕಲಾವಿದ, ದಿನೇಶ್ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.
ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ನೆಹರೂ ಸ್ಮಾರಕ ಮಹಾವಿದ್ಯಾಲಯದ ನೇಚರ್ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ನಡೆದ ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅಗತ್ಯ ಕುರಿತಾದ ಮಾಹಿತಿ ಹಾಗೂ
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟಗಳು ಮಳೆ ಬರಲು ಹಾಗೂ ಮಳೆ ನೀರ ಸಂಗ್ರಹಣೆಗೆ ಬೆಟ್ಟ ಗುಡ್ಡ ಶೋಲಾ ಅರಣ್ಯ ವ್ಯವಸ್ಥೆಯ ಮೂಲಕ ನೀಡುತ್ತಿರುವ ನೈಸರ್ಗಿಕ ಕೊಡುಗೆ. ಇದು ಜೀವವೈವಿಧ್ಯತೆಯ ಖಣಜ. ಹಲವು ಅವೈಜ್ಞಾನಿಕ ಯೋಜನೆಗಳಿಂದ ಪ್ರಕೃತಿಯ ವ್ಯವಸ್ಥೆಗಳಿಗೆ ತೊಂದರೆ ಆಗುತಿದೆ. ಇದರಿಂದ ವ್ಯತಿರಿಕ್ತ ಪರಿಣಾಮಗಳು ಆಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಕಾರ್ಯದರ್ಶಿ ಕೆ.ವಿ. ಹೇಮನಾಥ್ ಕುರುಂಜಿ ಗಿಡಕ್ಕೆ ನೀರೆರೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಸಂಜಯ್ ನೆಟ್ಟಾರ್, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ ಉಪಸ್ಥಿತರಿದ್ದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ವಂದಿಸಿದರು. ಚಂಪಾ ಮತ್ತು ತಂಡ ಪ್ರಾರ್ಥಿಸಿ, ಅರ್ಚನಾ ಅತಿಥಿಗಳನ್ನು ಪರಿಚಯಿಸಿದರು. ನೇಚರ್ ಕ್ಲಬ್ ಕಾರ್ಯದರ್ಶಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರುಗಳು, ಕಾಲೇಜಿನ ಉಪನ್ಯಾಸಕರು, ನೇಚರ್ ಕ್ಲಬ್ ಸದಸ್ಯರು ಮತ್ತು ಕಾಲೇಜು ಸಿಬ್ಬಂದಿ ವರ್ಗದವರು ಸಹಕರಿಸಿದರು.