ದುಬೈ: ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಭಾರತದ ಮಹಿಳಾ ತಂಡ ಜಯ ಸಾಧಿಸಿದೆ.ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಜಯಿಸಿದ ಕೌರ್ ಬಳಗದ ಸೆಮಿಫೈನಲ್ ಪ್ರವೇಶದ ಅವಕಾಶ ಜೀವಂತವಾಗಿರಿಸಿತು. ಎ ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತ ಸೋಲನುಭವಿಸಿತ್ತು.ಟಾಸ್ ಗೆದ್ದ ಪಾಕಿಸ್ತಾನ ತಂಡವು
ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಮಧ್ಯಮವೇಗಿ ಅರುಂಧತಿ ರೆಡ್ಡಿ (19ಕ್ಕೆ3) ಮತ್ತು ಕರ್ನಾಟಕದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ (12ಕ್ಕೆ2) ಅವರ ದಾಳಿಯ ಮುಂದೆ ಪಾಕ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 105 ರನ್ಗಳ ಸಾಧಾರಣ ಮೊತ್ತ ಗಳಿಸಿತು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಐದನೇ ಓವರ್ನಲ್ಲಿ ಮೊದಲ ಆಘಾತ ಎದುರಾಯಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (7 ರನ್) ಅವರ ವಿಕೆಟ್ ಗಳಿಸಿದ ಸಾದಿಯಾ ಇಕ್ಬಾಲ್ ಸಂಭ್ರಮಿಸಿದರು. ಈ ಹಂತದಲ್ಲಿ ಶಫಾಲಿ ವರ್ಮಾ (32; 35ಎ) ಮತ್ತು ಜೆಮಿಮಾ ರಾಡ್ರಿಗಸ್ (23; 28ಎ) ಎರಡನೇ ವಿಕೆಟ್ಗೆ 43 ರನ್ ಸೇರಿಸಿದರು. 12ನೇ ಓವರ್ನಲ್ಲಿ ಶಫಾಲಿ ಔಟಾಗಿದ್ದರಿಂದ ಜೊತೆಯಾಟ ಮುರಿಯಿತು.
ಇದಾಗಿ 3 ಓವರ್ಗಳ ನಂತರ ಪಾಕ್ ತಂಡದ ನಾಯಕಿ ಫಾತಿಮಾ ಸನಾ ಅವರು ಒಂದೇ ಓವರ್ನಲ್ಲಿ ಜೆಮಿಮಾ ಮತ್ತು ರಿಚಾ ಘೋಷ್ ಅವರಿಬ್ಬರನ್ನೂ ಔಟ್ ಮಾಡಿದರು. ಇದರಿಂದಾಗಿ ರನ್ ಗಳಿಕೆಯ ವೇಗ ಕುಂಠಿತವಾಯಿತು. ಒಂದು ಹಂತದಲ್ಲಿ 30 ಎಸೆತಗಳಿಗೆ 29 ರನ್ಗಳ ಅಗತ್ಯವಿತ್ತು. ಇದು ಭಾರತ ತಂಡದಲ್ಲಿ ತುಸು ಆತಂಕ ಮೂಡಿಸಿತು. ಈ ಹಂತದಲ್ಲಿ ತಾಳ್ಮೆಯುತವಾಗಿ ಆಡಿದ ನಾಯಕಿ ಹರ್ಮನಪ್ರೀತ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಆದರೆ, 19ನೇ ಓವರ್ನಲ್ಲಿ ಓಡುವ ಪ್ರಯತ್ನದಲ್ಲಿ ಆಯ ತಪ್ಪಿ ಬಿದ್ದ ಅವರು ಕುತ್ತಿಗೆ ನೋವಿನಿಂದಾಗಿ ಆಟ ಮೊಟಕುಗೊಳಿಸಿ ಡಗ್ಔಟ್ಗೆ ಮರಳಿದರು. ಕ್ರೀಸ್ಗೆ ಬಂದ ಸಜೀವನ್ ಸಜನಾ ವಿಜಯದ ಬೌಂಡರಿ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 20 ಓವರ್ಗಳಲ್ಲಿ 8 ವಿಕೆಟ್ಗೆ 105 (ಮುನೀಬಾ ಅಲಿ 17, ನಿದಾ ದಾರ್ 28; ಅರುಂಧತಿ ರೆಡ್ಡಿ 19ಕ್ಕೆ 3, ಶ್ರೇಯಾಂಕಾ ಪಾಟೀಲ 12ಕ್ಕೆ 2).
ಭಾರತ: 18.5 ಓವರ್ಗಳಲ್ಲಿ 4ಕ್ಕೆ 108 (ಶೆಫಾಲಿ ವರ್ಮಾ 32, ಜೆಮಿಯಾ ರಾಡ್ರಿಗಸ್ 23, ಹರ್ಮನ್ಪ್ರೀತ್ 29; ಫಾತಿಮಾ ಸನಾ 23ಕ್ಕೆ 2).