ಹೈದರಾಬಾದ್: ವಿಶ್ವಕಪ್ ಅಭಿಯಾನದ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡಗಳು ಸೋಲು ಅನುಭವಿಸಿದೆ. ಪಾಕಿಸ್ತಾನ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ಗಳ ಸೋಲು ಕಂಡಿದೆ. ಬಾಂಗ್ಲಾದೇಶ ತಂಡ ಶ್ರೀಲಂಕಾವನ್ನು 7 ವಿಕೆಟ್ ಅಂತರದಲ್ಲಿ ಸೋಲಿಸಿದೆ.
ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಜಮ್ ಮೊದಲು ಬ್ಯಾಟಿಂಗ್
ಮಾಡಲು ನಿರ್ಧರಿಸಿದರು. ನಾಯಕ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ 114 ರನ್ಗಳ ಜೊತೆಯಾಟ ನೀಡಿದರು ಬಾಬರ್ 80 ರನ್ ಗಳಿಸಿ ಔಟಾದರೆ, ರಿಜ್ವಾನ್ 103 ರನ್ಗಳ ಇನ್ನಿಂಗ್ಸ್ ಆಡಿದರು.
ಮಧ್ಯಮ ಕ್ರಮಾಂಕದಲ್ಲಿ ಸೌದ್ ಶಕೀಲ್ ಕೇವಲ 53 ಎಸೆತಗಳಲ್ಲಿ 75 ರನ್ಗಳ ಇನ್ನಿಂಗ್ಸ್ ಆಡಿದರು. ಹೀಗಾಗಿ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 345 ರನ್ ಕಲೆಹಾಕಿತು.
ಈ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ಗೆ ಆಲ್ರೌಂಡರ್ ರಚಿನ್ ರವೀಂದ್ರ ತಮ್ಮ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ರವೀಂದ್ರ 97 ರನ್ (72 ಎಸೆತ) ಗಳಿಸಿ ಔಟಾದರು. ಕೇನ್ ವಿಲ್ಯಮ್ಸ್ (59),ಡ್ಯಾರಿಲ್ ಮಿಚೆಲ್ (59 ನಿವೃತ್ತಿ), ಮಾರ್ಕ್ ಚಾಪ್ಮನ್ (ಅಜೇಯ 65, 41 ಎಸೆತ) ಮತ್ತು ಜೇಮ್ಸ್ ನೀಶಮ್ (33) ಅದ್ಭುತ ಬ್ಯಾಟಿಂಗ್ನಿಂದಾಗಿ ನ್ಯೂಜಿಲೆಂಡ್ ಕೇವಲ 45 ಓವರ್ಗಳಲ್ಲಿ ಪಾಕಿಸ್ತಾನ ನೀಡಿದ ಗುರಿಯನ್ನು ಸಾಧಿಸಿತು.
ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಶ್ರೀಲಂಕಾ ತಂಡವನ್ನು ಇನ್ನು 48 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ಗಳಿಂದ ಸೋಲಿಸಿದೆ. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಪಾತುಮ್ ನಿಸ್ಸಾಂಕ ಹಾಗೂ ಕುಸಾಲ್ ಪೆರೇರಾ ಶತಕದ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಿಸ್ಸಾಂಕ 68 ರನ್, ಪೆರೇರಾ 34 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.ಧನಂಜಯ ಡಿ ಸಿಲ್ವಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಲಂಕಾ ತಂಡ 50ನೇ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿತು.263 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಪರ ತಂಜಿದ್ ಹಸನ್ ಮತ್ತು ಲಿಟ್ಟನ್ ದಾಸ್ ಮೊದಲ ವಿಕೆಟ್ಗೆ 131 ರನ್ಗಳ ಜೊತೆಯಾಟ ನೀಡಿದರು. ಲಿಟ್ಟನ್ ದಾಸ್ 61 ರನ್ ಗಳಿಸಿ ಔಟಾದ ನಂತರ, ತಂಜಿದ್ ಮುನ್ನಡೆ ಕಾಯ್ದುಕೊಂಡರು. 88 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 84 ರನ್ ಸಿಡಿಸಿದರು.