ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಮುಖಾಮುಖಿಯಲ್ಲಿ ಭಾರತ ತಂಡ ಇಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ರೋಚಕ ಹಣಾಹಣಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಮಧ್ಯಾಹ್ನ 2 ರಿಂದ ಆರಂಭವಾಗಲಿದೆ. ಲೀಗ್ ಹಂತದಲ್ಲಿ ಆಡಿದ ಎಲ್ಲಾ ಒಂಬತ್ತು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಅಜೇಯ ಓಟ ಮುಂದುವರಿಸುವ ತವಕದಲ್ಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ
ನಾಯಕ ರೋಹಿತ್ ಶರ್ಮಾ, ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸದೇ ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಬೇಕಿದೆ ಎಂದು ಹೇಳಿದ್ದಾರೆ. ಇನ್ನೊಂದು ತಂಡದಿಂದ ಉಂಟಾಗುವ ಒತ್ತಡ ಅಥವಾ ಸವಾಲುಗಳ ಬದಲು ಪಂದ್ಯದ ಮೇಲೆ ಗಮನ ಕೇಂದ್ರಿಕರಿಸುವುದು ಮುಖ್ಯವೆನಿಸುತ್ತದೆ ಎಂದು ಅವರು ತಿಳಿಸಿದ್ದಾರೆ.ಲೀಗ್ ಪಂದ್ಯವಾಗಿರಲಿ, ಸೆಮಿಫೈನಲ್ ಅಥವಾ ಫೈನಲ್ ಪಂದ್ಯವೇ ಆಗಿರಲಿ. ಒತ್ತಡ ಯಾವಾಗಲೂ ಇರುತ್ತದೆ. ಮೊದಲ ಪಂದ್ಯದಿಂದ ಕೊನೆಯವರೆಗೂ ನಾವು ಒತ್ತಡವನ್ನು ಚೆನ್ನಾಗಿ ನಿಭಾಯಿಸಿದ್ದೇವೆ ಎಂದು ಅವರು ಹೇಳಿದರು. ನ್ಯೂಜಿಲೆಂಡ್ ಅತ್ಯಂತ ಶಿಸ್ತಿನ ತಂಡವಾಗಿದೆ. ಅವರು ಅತ್ಯುತ್ತಮ ಕ್ರಿಕೆಟ್ ಆಡುತ್ತಾರೆ. ಎದುರಾಳಿ ತಂಡದ ಬಲಾಬಲವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಮನೋಸ್ಥಿತಿಯನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ. ಐಸಿಸಿ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸುತ್ತದೆ ಎಂಬ ಚರ್ಚೆಯ ಬಗ್ಗೆ ಮಾತನಾಡಿದ ಅವರು ಈ ವಿಷಯದಲ್ಲಿ
ನಮಗೆ ಯಾವುದೇ ಚಿಂತೆಯಿಲ್ಲ ಎಂದಿದ್ದಾರೆ. ವಾಂಖೆಡೆಯಲ್ಲಿ ಟಾಸ್ ಪ್ರಮುಖ ಅಂಶ ಎಂಬುದನ್ನು ನಾನು ಪರಿಗಣಿಸುತ್ತಿಲ್ಲ. ಏಕೆಂದರೆ ನಾನು ಈ ಮೈದಾನದಲ್ಲಿ ಅನೇಕ ಪಂದ್ಯಗಳನ್ನಾಡಿದ್ದೇನೆ.
ಇಲ್ಲಿ ಆಡಲಾದ ಪಂದ್ಯಗಳಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಿದೆ ಎಂಬ ವಿಶ್ಲೇಷಣೆ ಗಮನಿಸಿದ್ದೇನೆ. ಆದರೆ ವಾಂಖೆಡೆಯಲ್ಲಿ ಟಾಸ್ ನಿರ್ಣಾಯಕವಲ್ಲ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲ್ಲುತ್ತದೆ, ಅಥವಾ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮಾಡಿದರೆ ಸೋಲುತ್ತದೆ ಎನ್ನುವುದು ಸರಿಯಲ್ಲ. ಹೀಗಾಗಿ ನಾನು ಟಾಸ್ ಬಗ್ಗೆ ಚಿಂತಿಸುವುದಿಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.









