ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ. 128 ಜನ ಗಾಯಗೊಂಡಿದ್ದು ಕೇರಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ. ಇನ್ನೂ ನೂರಾರು ಜನರು ಮಣ್ಣಿನಡಿ ಸಿಲುಕಿರುವ ಶಂಕೆಯಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ರಕ್ಷಣಾ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು
ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ರಾತ್ರಿ ತನಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ಬುಧವಾರ ಮುಂಜಾನೆ ರಕ್ಷಣಾ ಕಾರ್ಯಾಚರಣೆ ಆರಂಭಗೊಳ್ಳಲಿದೆ.
ತೀವ್ರವಾದ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಭೂಕುಸಿತ ಸಂಭವಿಸಿದ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ.
ಮಂಗಳವಾರ ನಸುಕಿನ 1ಗಂಟೆ ವೇಳೆಗೆ ಮೊದಲ ಭೂಕುಸಿತ ಸಂಭವಿಸಿದೆ, ಬಳಿಕ ಬೆಳಗಿನ ಜಾವ 4.10ಕ್ಕೆ ಮತ್ತೆ ಭೂಕುಸಿತ ಸಂಭವಿಸಿದ್ದು, ಮೆಪ್ಪಾಡಿ, ಮುಂಡಕ್ಕೈ ಮತ್ತು ಚೂರಲ್ಮಾಲಾ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಮಲಗಿದ್ದ ವೇಳೆ ಭೂಕುಸಿತ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯದಾಯಿತು. ಪರಿಣಾಮ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ವೆಲ್ಲಾರಿಮಾಲಾ ಪ್ರದೇಶದಲ್ಲಿ ಶಾಲೆಯೊಂದು ಸಂಪೂರ್ಣವಾಗಿ ಮಣ್ಣಿನಡಿಯಾಗಿದೆ.
ಸೇನೆ, ನೌಕಾಪಡೆ ಮತ್ತು ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರತಿಕೂಲ ಹವಾಮಾನ ಸ್ಥಿತಿ ಮುಂದುವರಿದಿದೆ. ಆದರೂ ಸಿಬ್ಬಂದಿ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ ಎಂದು ಸಿಎಂ ವಯನಾಡಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.