ಸುಳ್ಯ:ಸುಳ್ಯ ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಮೃತ್ 2 ಯೋಜನೆಯ ಕುಡಿಯುವ ನೀರು ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದರೆ ಅಧ್ಯಕ್ಷತೆಯಲ್ಲಿ ನಡೆದ ಜನಪ್ರತಿನಿಧಿಗಳ, ಇಂಜಿನಿಯರ್ಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಯೋಜನೆಯ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ ಹಾಗೂ ರಸ್ತೆಗಳನ್ನು ಕಡಿದು ಹಾಕಿ, ಪೈಪ್ ಲೈನ್ಗಳಿಗೆ ಹಾನಿ ಉಂಟಾಗಿ ಜನರಿಗೆ
ಭಾರೀ ಸಮಸ್ಯೆ ಉಂಟಾಗಿದೆ ಎಂದು ನಗರ ಪಂಚಾಯತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸುಳ್ಯ ನ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಪೂರೈಕೆ ಯೋಜನೆಯಲ್ಲಿ ಪೈಪು ಅಳವಡಿಕೆಗೆ ರಸ್ತೆ ಅಗೆಯುವ ಹಿನ್ನಲೆಯಲ್ಲಿ ಸಾರ್ವಜನಿಕರು ಹೈರಾಣರಾಗಿದ್ದಾರೆ. ಸುಳ್ಯ ಪಟ್ಟಣದಲ್ಲಿ ವಿವಿಧ ವಾರ್ಡ್ಗಳಲ್ಲಿ ಅಮೃತ್ ಯೋಜನೆ ಕಾಮಗಾರಿ ನಡೆಯುತ್ತಿದ್ದು ಇದೀಗ ಈ ಕಾಮಗಾರಿಯ ಪರಿಣಾಮ ನ.ಪಂ ಸದಸ್ಯರು ಹಾಗೂ ಆಡಳಿತವು ಜನರ ಕೆಂಗಣ್ಣಿಗೆ ಗುರಿಯಾಗಿದೆ. ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಗಳು

ಉದ್ಬವವಾಗುತ್ತಿದ್ದು ಕಾಂಕ್ರೀಟ್ ರಸ್ತೆ ,ಇಂಟರ್ ಲಾಕ್ , ಡಾಮರು, ರಸ್ತೆ, ಹಾಲಿ ಇರುವ ಪೈಪ್ಲೈನ್ಗೆ ಹಾನಿ ಸೇರಿದಂತೆ ಎಲ್ಲವೂ ಅಸ್ತವ್ಯಸ್ತವಾಗಿದೆ ಎಂದು ಸದಸ್ಯರು ದೂರಿದರು. ಕಾಮಗಾರಿ ನಡೆಸುವ ಸಂದರ್ಭದಲ್ಲಿ ನಗರ ಪಂಚಾಯತ್ಗೆ ಮಾಹಿತಿ ನೀಡದೆ ಅಗೆಯುವ ಕಾರಣ ನೀರಿನ ಪೈಪುಗಳಿಗೆ ಹಾನಿ ಸಂಭವಿಸುತ್ತಿದ್ದು ನೀರು ಸರಬರಾಜಿಗೆ ಸಮಸ್ಯೆ ಉಂಟಾಗುತಿರುವ ಬಗ್ಗೆ ದೂರು ಬಂದಿದೆ. ಪೈಪ್ಗಳಿಗೆ ಹಾನಿ ಸಂಭವಿಸಿದರೆ ಕೂಡಲೇ ಸರಿಪಡಿಸಬೇಕು ಎಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿದೆ ಸೂಚಿಸಿದರು. ನಗರದಲ್ಲಿ ಕಾಮಗಾರಿ ಅವ್ಯವಸ್ಥೆಯಿಂದ ಸಮಸ್ಯೆಯ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಗರ ಪಂಚಾಯತ್ ಸದಸ್ಯರು ಕಾಮಗಾರಿಯನ್ನು ಶೀಘ್ರ ಪೂರ್ತಿ ಮಾಡಬೇಕು, ರಸ್ತೆ, ಪೈಪ್ಲೈನ್, ಇಂಟರ್ಲಾಕ್ ಸೇರಿ ಜನರಿಗೆ ಉಂಟಾಗಿರುವ ಸಮಸ್ಯೆಯನ್ನು ಕೂಡಲೇ ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರು.
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜಯ್ ಮಾತನಾಡಿ ನಗರದಲ್ಲಿ ಅಗೆದಿರುವ ಕಾಂಕ್ರೀಟ್ ರಸ್ತೆಗಳಿಗೆ ಈಗಾಗಲೇ ಮರು ಕಾಂಕ್ರೀಟಿಕರಣ ನಡೆಸುವ ಕೆಲಸ ಆರಂಭವಾಗಿದ್ದು ಅವುಗಳನ್ನು ಮಳೆಗೆ ಮುಂಚಿತವಾಗಿ ಪೂರ್ಣಗೊಳಿಸುತ್ತೆವೆ ಅಲ್ಲದೇ ಡಾಮರೀಕರಣ ಮತ್ತು ಇಂಟರ್ಲಾಕ್ಗಳನ್ನು ಯಥಾಸ್ಥಿತಿಗೆ ತರುತ್ತೆವೆ ಎಂದು ಹೇಳಿದರು.
ನ.ಪಂ.ಸದಸ್ಯರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಬಾಲಕೃಷ್ಣ ರೈ, ರಾಜು ಪಂಡಿತ್ ಮತ್ತಿತರರು ಸಭೆಯಲ್ಲಿ ಮಾತನಾಡಿದರು. ನ.ಪಂ ಉಪಾಧ್ಯಕ್ಷ ಬುದ್ದ ನಾಯ್ಕ್ ,ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ , ಮುಖ್ಯಾಧಿಕಾರಿ ಸುಧಾಕರ ಎಂ ಹೆಚ್, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಶ್ರೀಕಾಂತ್, ಹಾಗೂ ನ.ಪಂ ಸದಸ್ಯರು ಎಂಜಿನಿಯರ್ಗಳು ಹಾಗೂ ಅಧಿಕಾರಿಗಳು,ಗುತ್ತಿಗೆದಾರರು ಉಪಸ್ಥಿತರಿದ್ದರು.