ಸುಳ್ಯ:ಕಳೆದ ಹಲವು ತಿಂಗಳಿನಿಂದ ಜಟ್ಟಿಪಳ್ಳ, ಕೊಡಿಯಾಲಬೈಲು ಭಾಗದಲ್ಲಿ ನೀರಿನ ಸಮಸ್ಯೆಯಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಜಟ್ಟಿಪಳ್ಳ ಭಾಗದ ನಾಗರಿಕರು ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮಂಗಳವಾರ ನಗರ ಪಂಚಾಯತ್ ಸಾಮಾನ್ಯ ಸಭೆ ನಡೆಯುತ್ತಿದ್ದಂತೆ
ನ.ಪಂ.ಎಸುರು ಖಾಲಿ ಕೊಡ ಇರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿಸರು. ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಮುಖರಾದ ರಶೀದ್ ಜಟ್ಟಿಪಳ್ಳ ಕಲ್ಲುಮುಟ್ಲುವಿನಲ್ಲಿ ಪಂಪ್ ಸರಿ ಇಲ್ಲ ಎಂದು ಹಲವು ತಿಂಗಳಿನಿಂದ ಈ ಭಾಗಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. 2 ಬೋರ್ ಕೂಡ ಹಾಳಾಗಿದೆ. ಇದರಿಂದ ಜನರ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆ ಆಗಿದೆ. ನಗರ ಪಂಚಾಯತ್ಗೆ ಹಲವು ಬಾರಿ ಮನವಿ ನೀಡಿದರೂ ಸಮಸ್ಯೆ ಪರಿಹಾರ ಆಗಿಲ್ಲ. ನೀರಿನ ಸಮಸ್ಯೆ ಕೂಡಲೇ ಪರಿಹರಿಸಬೇಕು. ಇಲ್ಲದೇ ಇದ್ದಲ್ಲಿ ಈ ಭಾಗದ ಎಲ್ಲಾ ಸಾರ್ವಜನಿಕರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಖಲಂದರ್ ಎಲಿಮಲೆ, ಮೊಯ್ದೀನ್, ರಝಾಕ್ ಜಟ್ಟಿಪಳ್ಳ, ಶಿಯಾಬ್, ಅಲ್ತಾಫ್, ಸುಲೈಮನ್, ಬದ್ರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ‘ಬೋರ್ವೆಲ್ ನವೀಕರಣಕ್ಕೆ ಟೆಂಡರ್ ಆಗಿದೆ. ಬೋರ್ವೆಲ್ ನವೀಕರಣ ಕೂಡಲೇ ಮಾಡಲಾಗುವುದು. ಆ ತನಕ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಉಪಸ್ಥಿತರಿದ್ದರು.