ಸುಳ್ಯ:ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೇರ್ಪಳ ಭಾಗದಲ್ಲಿ ಕಳೆದ ಎಂಟು ದಿನಗಳಿಂದ ನಗರ ಪಂಚಾಯತ್ನ ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಕೇರ್ಪಳ ಕಟ್ಟೆಯ ಆಸು ಪಾಸಿನ ಸುಮಾರು
50ಕ್ಕೂ ಹೆಚ್ಚು ಮನೆಗಳಿಗೆ ಸುಮಾರು ಎಂಟು ದಿನಗಳಿಂದ ನೀರು ಸರಬರಾಜು ನಿಂತಿದೆ. ನಗರ ಪಂಚಾಯತ್ ನೀರನ್ನೇ ನಂಬಿ ಕೊಂಡಿರುವ ಈ ಪ್ರದೇಶದ ಮನೆಗಳಿಗೆ ಕುಡಿಯಲು ಹಾಗೂ ಇತರ ದೈನಂದಿನ ಅಗತ್ಯತೆಗಳಿಗೆ ನೀರು ಇಲ್ಲದಂತಾಗಿದೆ. ಹಲವು ಬಾರಿ ನಗರ ಪಂಚಾಯತ್ಗೆ ಮಾಹಿತಿ ನೀರು ಸರಬರಾಜು ಸರಿಪಡಿಸುವಂತೆ ವಿನಂತಿಸಿದರೂ ನೀರು ಸರಬರಾಜು ಸರಿ ಪಡಿಸಿಲ್ಲ. ಕೂಡಲೇ ನೀರು ಸರಬರಾಜು ವ್ಯವಸ್ಥೆ ಪುನಃಸ್ಥಾಪಿಸದೇ ಇದ್ದರೆ ಸಾರ್ವಜನಿಕರು ಸೇರಿ ಖಾಲಿ ಕೊಡ ಹಿಡಿದು ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಸುನಿಲ್ ಕೇರ್ಪಳ ಹೇಳಿದ್ದಾರೆ.












