ಸುಳ್ಯ: ಸುಳ್ಯ ನಗರದಲ್ಲಿ ಆರಂಭಗೊಂಡಿರುವ ಕುಡಿಯುವ ನೀರಿನ ಯೋಜನೆಯ ಪೈಪುಗಳನ್ನು ಅಳವಡಿಸುವ ಕಾಮಗಾರಿಯಿಂದ ಸುಳ್ಯದ ನಾನಾ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಗೆ ಕೂಡಲೇ ನೀರಿನ ವ್ಯವಸ್ಥೆ ಅಳವಡಿಸಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ನಗರ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಪೈಪ್ ಅಳವಡಿಕೆಗೆ ಇದು ಸೂಕ್ತ
ಸಮಯ ಅಲ್ಲ. ಇದರಿಂದ ವಿವಿಧ ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕೆಲವು ಮನೆಯವರು ನೀರಿಲ್ಲದೆ ಮನೆ ಬಿಟ್ಟು ತೆರಳುವ ಸ್ಥಿತಿ ನಿರ್ಮಾಣ ಆಗಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಸುಳ್ಯ ನಗರದಲ್ಲಿ ಆರಂಭಗೊಂಡಿರುವ 58 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ

ಅವೈಜ್ಞಾನಿಕ ಸ್ಥಿತಿ ಏರ್ಪಟ್ಟಿದ್ದು ಇದರಿಂದ ಇಂದು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ನೂತನ ಪೈಪುಗಳ ಅಳವಡಿಕೆಯಿಂದಾಗಿ ಅಲ್ಲಲ್ಲಿ ಹಳೆಯ ಪೈಪುಗಳು ಒಡೆದು ನೀರಿಗೆ ಸಮಸ್ಯೆ ಉಂಟಾದರೆ ಕೆಲವು ಕಡೆಗಳಲ್ಲಿ ಮಣ್ಣು ಮಿಶ್ರಿತ ನೀರು ನಲ್ಲಿಗಳಲ್ಲಿ ಬಂದು ಸುಳ್ಯದ ಜನತೆ ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.
ಬಳಿಕ ನಗರ ಪಂಚಾಯತ್ ಆಡಳಿತಾಧಿಕಾರಿ, ತಹಶೀಲ್ದಾರ್ ಎನ್.ಮಂಜುನಾಥ್ ಆಗಮಿಸಿ ಮನವಿ ಸ್ವೀಕರಿಸಿದರು. ಯೋಜನೆ ಅನುಷ್ಠಾನ ಮಾಡುವ ಇಂಜಿನಿಯರ್ ಮತ್ತು ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಪರಿಹಾರ ಮಾಡುವುದಾಗಿ ತಹಶೀಲ್ದಾರ್ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.









