ಹಾಂಗ್ಝೌ: ಭಾರತ ವಾಲಿಬಾಲ್ ಪುರುಷರ ತಂಡ ಶುಕ್ರವಾರ 3–0 ಯಿಂದ ಚೀನಾ ತೈಪೆ ತಂಡವನ್ನು ಸೋಲಿಸಿ ಏಷ್ಯನ್ ಗೇಮ್ಸ್ ಸ್ಪರ್ಧೆಯ ಕ್ವಾರ್ಟರ್ಫೈನಲ್ ತಲುಪಿತು. ಭಾರತ ಭಾನುವಾರ ನಡೆಯುವ ಪಂದ್ಯದಲ್ಲಿ ಜಪಾನ್ ಅಥವಾ ಕಜಕಸ್ತಾನ ತಂಡವನ್ನು ಎದುರಿಸಲಿದೆ. ಭಾರತ 25–22, 25–22, 25–21 ರಿಂದ ತೈಪೆ ತಂಡವನ್ನು ಸೋಲಿಸಿತು. ಮೊದಲ
ಸೆಟ್ನ ಬಹುತೇಕ ಸಮಯ ಹಿಂದಿದ್ದ ಭಾರತ ಕೊನೆಗೂ 21–21ರಲ್ಲಿ ಸಮ ಮಾಡಿಕೊಂಡಿತು. ಈ ಹಂತದಲ್ಲಿ ಎರಿನ್ ವರ್ಗಿಸ್ ಮತ್ತು ಅಶ್ವಲ್ ರೈ ಮುನ್ನಡೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡನೇ ಸೆಟ್ನಲ್ಲೂ ಉತ್ತಮ ಹೋರಾಟ ಕಂಡುಬಂದು ಸ್ಕೋರ್ ಒಂದು ಹಂತದಲ್ಲಿ 17–17 ಸಮನಾಗಿತ್ತು. ಆದರೆ ನಿರ್ಣಾಯಕ ಸಂದರ್ಭದಲ್ಲಿ ಭಾರತ ಬೆನ್ನುಬೆನ್ನಿಗೆ ಪಾಯಿಂಟ್ ಕಲೆಹಾಕಿತು. ಮೂರನೇ ಸೆಟ್ನಲ್ಲಿ ಭಾರತ ಸಕಾರಾತ್ಮಕ ಆರಂಭ ಮಾಡಿ 10–4ರಲ್ಲಿ ಉತ್ತಮ ಮುನ್ನಡೆ ಹೊಂದಿತ್ತು. ಆದರೆ ತೈಪೆ ಆಟಗಾರರು ಪ್ರತಿಹೋರಾಟ ನೀಡಿ ಹಿನ್ನಡೆಯನ್ನು 10–12ಕ್ಕೆ ಇಳಿಸಿದರು. ಸ್ಕೋರ್ ಒಂದು ಹಂತದಲ್ಲಿ 14–14ರಲ್ಲಿ ಸಮನಾಗಿತ್ತು. ಆದರೆ ಭಾರತ ಮತ್ತೆ 21–18ರಲ್ಲಿ ಮುನ್ನಡೆ ಸಾಧಿಸಿತಲ್ಲದೇ, ಅಂತಿಮವಾಗಿ 25–21ರಲ್ಲಿ ಮೂರನೇ ಸೆಟ್ನಲ್ಲೂ ಜಯಗಳಿಸಿತು. ದಕ್ಷಣಿಣ ಕೊರಿಯಾ ಮತ್ತು ಚೀನಾ ತೈಪೆ ತಂಡಗಳ ಮೇಲೆ ಬೆನ್ನುಬೆನ್ನಿಗೆ ಗಳಿಸಿದ ಜಯಗಳಿಂದ ಭಾರತ ಈಗ ಜಪಾನ್ ತಂಡವನ್ನು ವಿಶ್ವಾಸದಿಂದ ಎದುರಿಸಲು ಸಜ್ಜಾಗಿದೆ.