ವಿಟ್ಲ: ನಮ್ಮ ಹಿರಿಯರು ಬಾಳಿ ಬದುಕಿದ ಆ ಕುಟುಂಬ ಪರಂಪರೆ. ಹಿರಿಯರ ಜೀವನ ಪದ್ದತಿ ಆಚಾರ ವಿಚಾರ, ಸಂಸ್ಕೃತಿ ಸಂಸ್ಕಾರಗಳು ಮುಂದಿನ ಪೀಳಿಗೆಗೆ ಹಸ್ತಾಂತರ ಆಗಬೇಕು ಮತ್ತು ಅದು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ. ಆಶಯ
ವ್ಯಕ್ತಪಡಿಸಿದರು. ಅವರು ಮೂರ್ಜೆ ನಂದನ ವಂಶ ಒಕ್ಕಲಿಗ ತರವಾಡು ಟ್ರಸ್ಟ್ ಕೊಡಂಗಾಯ ವಿಟ್ಲದ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ಪ್ರತಿ ಕುಟುಂಬದಲ್ಲೂ ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆಧುನಿಕತೆಯ ಹೆಸರಿನಲ್ಲಿ ಬೆಳೆಯುತ್ತಿರುವ ಯುವ ಸಮಾಜ ಬೇರೆ ದಿಕ್ಕಿನತ್ತ ವಾಲುತ್ತಿರುವುದು ಇತರ ಸಮುದಾಯದವರ ಸಂಸ್ಕೃತಿಗಳನ್ನು ಬಹಳ ಬೇಗನೆ ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಮಕ್ಕಳ ಭವಿಷ್ಯವನ್ನು ಅತ್ಯಂತ ಜಾಗರೂಕವಾಗಿ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮವು ಅತ್ಯಂತ ಅಗತ್ಯವಾಗಿದೆ. ಮನುಷ್ಯ ಮನುಷ್ಯರ ನಡುವೆ ಪ್ರೀತಿ ಭಾಂಧವ್ಯ ಹೆಚ್ಚಿನ ಸಧೃಢ ಸಮಾಜವನ್ನು ನಿರ್ಮಿಸಿ ಆ ಮೂಲಕ ನೆಮ್ಮದಿಯ ಜೀವನ ನಡೆಸುವತ್ತಾಂತ ಕೆಲಸ ಮತ್ತು ಗುರು ಪರಂಪರೆಯ ಮೂಲಕ ಧರ್ಮ ಶಿಕ್ಷಣವನ್ನು ನೀಡುವ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಆದಿಚುಂಚನ ಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ ತೀರ್ಥರಾಮ, ಮೂರ್ಜೆ ನಂದನ ವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ನ ಇದರ ಅಧ್ಯಕ್ಷರಾದ ಕೆ.ಎಸ್ ಗೋಪಾಲಕೃಷ್ಣ ಹಾಗು ಪಧಾಧಿಕಾರಿಗಳು ಉಪಸ್ಥಿತರಿದ್ದರು.