ಬನಾರಿ: ಬದುಕಿನಲ್ಲಿ ಸಂತೋಷ ಮತ್ತು ನೆಮ್ಮದಿ ದೊರೆಯಲು ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಆರಾಧಿಸಬೇಕು. ಕಲೆ ಮತ್ತು ಸಾಂಸ್ಕೃತಿಕ ಕೇಂದ್ರಗಳು ನೆಮ್ಮದಿಯ ತಾಣಗಳು ಎಂದು ಬಂದರು, ಮೀನುಗರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದರು.ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ
ಹಿರಿಯ ಯಕ್ಷಗಾನ ಪ್ರಸಂಗಕರ್ತರು,ಭಾಗವತರು ಹಾಗು ಯಕ್ಷಗಾನ

ಗುರುಗಳಾದ ವಿಶ್ವ ವಿನೋದ ಬನಾರಿಯವರ ಅಭಿನಂದನಾ ಸಮಾರಂಭ ‘ವಿಶ್ವ ವಿನೋದ ಯಕ್ಷ ಕಲಾರವ’ದಲ್ಲಿ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವ ವಿನೋದ ಬನಾರಿಯವರನ್ನು ಸನ್ಮಾನಿಸಿ ಮಾತನಾಡಿದ ಉದುಮ ಶಾಸಕ ಸಿ.ಎಚ್.ಕುಂಞಂಬು’ ಬನಾರಿ ಯಕ್ಷಗಾನ ಕಲಾ ಕೇಂದ್ರದ ಅಭಿವೃದ್ಧಿಗೆ ಕೇರಳ ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನ ನಡೆಸುವುದಾಗಿ ಹೇಳಿದರು.
ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಎ.ನಾರಾಯಣ ನಾಯ್ಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೇಲಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಎ.ಉಷಾ ಮುಖ್ಯ ಅತಿಥಿಯಾಗಿದ್ದರು. ಅಭಿನಂದನಾ ಗ್ರಂಥ ‘ವಿಶ್ವಯಾನ’ವನ್ನು ಅತಿಥಿಗಳು ಬಿಡುಗಡೆ ಮಾಡಿದರು. ಚಂದ್ರಶೇಖರ ಏತಡ್ಕ ಸಂಪಾದಕೀಯ ಮಂಡಳಿಯ ಪರವಾಗಿ ಮಾತನಾಡಿದರು. ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆ ಗ್ರಂಥಾವಲೋಕನ ನಡೆಸಿದರು. ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಅಭಿನಂದನಾ ಭಾಷಣ ಮಾಡಿದರು. ನಾರಾಯಣ ತೋರಣಗುಂಡಿ ಶಿಷ್ಯರ ಪರವಾಗಿ ಅಭಿನಂದನೆ ಸಲ್ಲಿಸಿದರು. ಡಾ.ರಮಾನಂದ ಬನಾರಿ, ಡಾ.ಪ್ರಭಾಕರ ಶಿಶಿಲ, ಗಣರಾಜ ಕುಂಬ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿಯ ಅಧ್ಯಕ್ಷ ನಾರಾಯಣ ದೇಲಂಪಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಮಾಸ್ತರ್ ದೇಲಂಪಾಡಿ ವಂದಿಸಿದರು. ಅಪರ್ಣಾ ರಾವ್ ಕುತ್ಯಾಡಿ, ಜಲಜಾಕ್ಷಿ ಟೀಚರ್ ಬೆಳ್ಳಿಪ್ಪಾಡಿ, ವಿಕೇಶ್ ರೈ ಶೇಣಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಂವಾದ ಸೌರಭ, ಕಲಾಸಂಘದ ಕೀರಿಕ್ಕಾಡು ಯಕ್ಷಗಾನ ಅಧ್ಯಯನ ಕೇಂದ್ರದ ಬಾಲಕಲಾವಿದರಿಂದ ಯಕ್ಷಗಾನ ಬಯಲಾಟ ವೀರ ಬಬ್ರುವಾಹನ, ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಮಹಿಷ ಮರ್ದಿನಿ ನಡೆಯಿತು.