ಬನಾರಿ: ಹಿರಿಯ ಯಕ್ಷಗಾನ ಪ್ರಸಂಗಕರ್ತರು,ಭಾಗವತರು ಹಾಗು ಯಕ್ಷಗಾನ ಗುರುಗಳಾದ ವಿಶ್ವವಿನೋದ ಬನಾರಿಯವರು 75ರ ಹೊಸ್ತಿಲಲ್ಲಿರುವ ಹಿನ್ನಲೆಯಲ್ಲಿ ಅವರ ಅಭಿನಂದನಾ ಸಮಾರಂಭ ‘ವಿಶ್ವವಿನೋದ ಯಕ್ಷ ಕಲಾರವ’ ನ.13 ರಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ. ಅವರ ಶಿಷ್ಯ ವೃಂದ, ಅಭಿಮಾನಿಗಳು ಹಾಗು ಬಂಧು ಮಿತ್ರರು ಸೇರಿದ ವಿಶ್ವವಿನೋದ ಬನಾರಿ ಅಭಿನಂದನಾ ಸಮಿತಿಯ
ಆಶ್ರಯದಲ್ಲಿ ದಿನಪೂರ್ತಿ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ.ಬೆಳಿಗ್ಗೆ ಗಂಟೆ 8 ರಿಂದ ಗಣಹೋಮ,ಶ್ರೀ ಗೋಪಾಲಕೃಷ್ಣ ದೇವರ ಪೂಜೆ ನಡೆಯಲಿದೆ.ಬೆಳಿಗ್ಗೆ 9 ರಿಂದ 10.30ರ ತನಕ ಬನಾರಿ ಶಿಷ್ಯ ವೃಂದದಿಂದ ವಿಶ್ವಯಕ್ಷಗಾಯನಾಭಿವಂದನೆ ಗಾನವೈಭವ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುವರು. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಪುನರ್ ಮುದ್ರಿತ ಆತ್ಮಕಥೆ ‘ಯಕ್ಷರಸಜೀವನ’ ವನ್ನು ಅವರು ಬಿಡುಗಡೆ ಮಾಡುವರು.ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸುವರು.

ಬೆಳಿಗ್ಗೆ 11 ಗಂಟೆಯಿಂದ ಯಕ್ಷಗಾನ ಗೋಷ್ಠಿ ಯಕ್ಷಗಾನ ಹಾಡುಗಾರಿಕೆ ಸಾಂಪ್ರದಾಯಿಕ ಮಟ್ಟುಗಳು – ಒಂದು ಪ್ರಾತ್ಯಕ್ಷಿಕೆ ನಡೆಯಲಿದೆ. ಮಧ್ಯಾಹ್ನ ಭೋಜನದ ಬಳಿಕ ಉಡುಪಿಯ ಕೊಡವೂರು ನೃತ್ಯ ನಿಕೇತನ ಕಲಾವಿದರಿಂದ ನೃತ್ಯ ಸಿಂಚನ ನಡೆಯಲಿದೆ. ಅಪರಾಹ್ನ 3 ಗಂಟೆಯಿಂದ ಅಭಿನಂದನಾ ಸಮಾರಂಭ ನಡೆಯಲಿದೆ.
ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಉದುಮ ಶಾಸಕ ಸಿ.ಎಚ್.ಕುಂಞಂಬು, ಯಕ್ಷಗಾನ ಅಕಾಡೆಮಿಯ ಸ್ಥಾಯಿ ಸಮಿತಿ ಸದಸ್ಯ ಎಂ.ದಾಮೋದರ ಶೆಟ್ಟಿ ಭಾಗವಹಿಸುವರು.
ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಎ.ನಾರಾಯಣ ನಾಯ್ಕ್ ಅಭಿನಂದನಾ ಗ್ರಂಥ ‘ವಿಶ್ವಯಾನ’ ಬಿಡುಗಡೆ ಮಾಡಲಿದ್ದಾರೆ.ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಅಭಿನಂದನಾ ಭಾಷಣ ಮಾಡಲಿದ್ದಾರೆ.ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆ ಗ್ರಂಥಾವಲೋಕನ ಮಾಡುವರು.ನಾರಾಯಣ ತೋರಣಗುಂಡಿ ಶಿಷ್ಯ ನುಡಿ ವಂದನೆ ಸಲ್ಲಿಸುವರು. ಡಾ.ರಮಾನಂದ ಬನಾರಿ, ಡಾ.ಪ್ರಭಾಕರ ಶಿಶಿಲ, ಗಣರಾಜ ಕುಂಬ್ಲೆ ಉಪಸ್ಥಿತರಿರುವರು.

ಸಂಜೆ 5 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಂವಾದ ಸೌರಭ ಸಂಜೆ 6.30 ರಿಂದ ಕಲಾಸಂಘದ ಕೀರಿಕ್ಕಾಡು ಯಕ್ಷಗಾನ ಅಧ್ಯಯನ ಕೇಂದ್ರದ ಬಾಲಕಲಾವಿದರಿಂದ ಸರೋಜಿನಿ ಬನಾರಿ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ‘ವೀರ ಬಬ್ರುವಾಹನ’ ನಡೆಯಲಿದೆ . ರಾತ್ರಿ 8 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ‘ಮಹಿಷ ಮರ್ದಿನಿ’ ನಡೆಯಲಿದೆ .