ಸುಳ್ಯ: ಮನಸ್ಸನ್ನು ಕೆರಳಿಸುವ ಪತ್ರಿಕೋದ್ಯಮ ಬೇಡ. ಬದಲಾಗಿ ಜನರ ಮನಸ್ಸನ್ನು ಅರಳಿಸುವ ಮತ್ತು ಜನರಿಗೆ ಆತ್ಮವಿಶ್ವಾಸ ತುಂಬುವ ಪತ್ರಿಕೋದ್ಯಮ ಇಂದಿನ ಅಗತ್ಯತೆಯಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಇಂಜಿನಿಯರ್, ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್ ಹೇಳಿದ್ದಾರೆ. ವಿಸ್ತಾರ ಕನ್ನಡ ಚಾನೆಲ್ನ ಪ್ರಚಾರಾರ್ಥಾವಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ವಿಸ್ತಾರ ಕನ್ನಡ ಸಂಭ್ರಮ’ವನ್ನು ಉದ್ಘಾಟಿಸಿ
ಅವರು ಮಾತನಾಡಿದರು. ಧನಾತ್ಮಕ ದೃಷ್ಠಿಕೋನ ಹಾಗು ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂದ ಅವರು ವಿಸ್ತಾರ ಚಾನೆಲ್ ಕನ್ನಡಿಗರ ಹೃದಯ ಗೆಲ್ಲಲಿ ವಿಸ್ತಾರ ವಿಸ್ತರಿಸಿ ಎತ್ತರಕ್ಕೆ ಬೆಳೆಯಲಿ ಎಂದು ಅವರು ಆಶಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಮಾತನಾಡಿ ‘ ಸಮಾಜವನ್ನು ಬೆಸೆಯುವ ಕೊಂಡಿಯಾಗಿ ವಿಸ್ತಾರ ಸುದ್ದಿ ಮಾಧ್ಯಮ ಎಲ್ಲೆಡೆ ವಿಸ್ತರಿಸಲಿ ಎಂದು ಆಶಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಮಾಧ್ಯಮಗಳಲ್ಲಿ ಬರುವ ಸುದ್ದಿ ಹಾಗು ವಿಶ್ಲೇಷಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆ ಮೂಲಕ ಜ್ಞಾನ ಸಂಪಾದನೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಮಾತನಾಡಿ’ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗ. ಸತ್ಯ ಮತ್ತು ನಿಖರವಾದ ಸುದ್ದಿಗಳು ಮತ್ತು ಮಾಹಿತಿ ಜನರಿಗೆ ಅತೀ ಅಗತ್ಯ. ವಿಸ್ತಾರ ಸುದ್ದಿ ಮಾಧ್ಯಮ ಸತ್ಯದ ಮತ್ತು ಜನಪರ ಸುದ್ದಿಗಳ ಮೂಲಕ ಜನರ ಒಡನಾಡಿಯಾಗಲಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ’ ಇಂದು ಸುದ್ದಿ ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿಯಾಗಿದೆ. ಪ್ರಜಾ ಪ್ರಭುತ್ವದ ರಕ್ಷಾ ಕವಚವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು.ವೇಗವಾಗಿ ಮತ್ತು ನಿಖರವಾಗಿ ಸುದ್ದಿ ಕೊಡುವ ಮೂಲಕ ವಿಸ್ತಾರ ಕನ್ನಡಿಗರ ಮನ ಗೆಲ್ಲಲಿ ಎಂದು ಹೇಳಿದರು.

ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮಾತನಾಡಿ ‘ ಪ್ರತಿಯೊಬ್ಬರೂ ಪತ್ರಕರ್ತರಾಗಿರುವ ಆಧುನಿಕ ಯುಗದಲ್ಲಿ ಅಭಿವೃದ್ಧಿಯ ದೃಷ್ಠಿ ಕೋನದಲ್ಲಿ ಜನಪರವಾಗಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಪತ್ರಕರ್ತರ ಮತ್ತು ಮಾಧ್ಯಮಗಳ ಮೇಲಿದೆ ಎಂದು ಹೇಳಿದರು.

ಸ್ನೇಹ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿದರು. ವಿಸ್ತಾರ ಚಾನೆಲ್ನ ಮಂಗಳೂರು ಜಿಲ್ಲಾ ವರದಿಗಾರ ರಾಜೇಶ್ ರಾವ್, ಕ್ಯಾಮೆರಾಮೆನ್ ಲಕ್ಷ್ಮಣ್ ಉಪಸ್ಥಿತರಿದ್ದರು. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಶಿಕ್ಷಕಿ ಸವಿತಾ ವಂದಿಸಿದರು. ಸ್ನೇಹ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಿಕ್ಷಕ ದೇವಿಪ್ರಸಾದ್ ಜಿ.ಸಿ.ಕಾರ್ಯಕ್ರಮ ನಿರೂಪಿಸಿದರು.