ಸುಳ್ಯ: ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಕಲ್ಮಡ್ಕದ ರಾಮನಗರದ ಶ್ರೀರಾಮ ಭಜನಾ ಮಂದಿರದ
ಪಂಚವಟಿ ಸಭಾಭವನದಲ್ಲಿ ನಡೆಯತ್ತಿರುವ ವಿಪ್ರ ಸಮಾವೇಶದ ಮೊದಲ ದಿನ ವಿವಿಧ ಗೋಷ್ಠಿಗಳು ನಡೆದವು. ವಿವಿಧ ವಿಚಾರಗಳ ಬಗ್ಗೆ ನಡೆದ ವಿಚಾರಗೋಷ್ಠಿಗಳು ಚಿಂತನೆಗೆ ಒರಗೆ ಹಚ್ಚಿದವು.ಗೋಷ್ಠಿಗಳಲ್ಲಿ ಮೂಡಿ ಬಂದ ವಿಚಾರಧಾರೆಗಳು ನೆರೆದ ಯುವ ಸಮೂಹಕ್ಕೆ
ಮಾಹಿತಿಯ, ಅರಿವಿನ ಧಾರೆ ಹರಿಸಿ ಆತ್ಮ ವಿಶ್ವಾಸ ಹೆಚ್ಚಿಸುವಂತಿತ್ತು. ಸಂಪನ್ಮೂಲ ವ್ಯಕ್ತಿಗಳು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರ ವಲಸೆ ಕುರಿತು ಹಿರಿಯ ವಿದ್ವಾಂಸರು ಹಾಗೂ ನಿವೃತ್ತ ಪ್ರಾಂಶುಪಾಲರಾದ
ಡಾ. ಎಂ.ಪ್ರಭಾಕರ ಜೋಷಿಯವರು ಮಾತನಾಡಿದರು. ಕೃಷಿ, ಸಂಸ್ಕೃತಿ, ಪರಂಪರೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ನೆಲೆ ನಿಂತ ಬ್ರಾಹ್ಮಣ ಸಮಾಜ ಈ ಮಣ್ಣಿನಲ್ಲಿ ಕೃಷಿಯ ಮೂಲಕ ಮಣ್ಣಿನಲ್ಲಿ ಹೊನ್ನು ಬೆಳೆಸಿದರು. ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ವೈದಿಕ, ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ದೊಡ್ಡ ಕೊಡುಗೆ ನೀಡಿ ಈ ಜಿಲ್ಲೆಯಲ್ಲಿ ಅದ್ಭುತ ಮತ್ತು ಸುಸಂಸ್ಕೃತ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಡಾ.ಎಂ.ಪ್ರಭಾಕರ ಜೋಷಿ
‘ಸಾಹಿತ್ಯದಲ್ಲಿ ಸುಳ್ಯ ಬ್ರಾಹ್ಮಣರ ಕೊಡುಗೆ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಖ್ಯಾತ ಬರಹಗಾರರಾದ ಡಾ.ದೀಪಾ ಪಡ್ಕೆ’ ಸಾಹಿತ್ಯ ಪರಂಪರೆಗೆ ಸುಳ್ಯ ಗಣನೀಯ ಕೊಡುಗೆ ನೀಡಿದೆ. ಯಕ್ಷಗಾನ ಸಾಹಿತ್ಯದಿಂದ ಹಿಡಿದು, ಭಕ್ತಿ ಸಾಹಿತ್ಯ, ಕಾವ್ಯ, ಕಾದಂಬರಿವರೆಗೆ ಇಲ್ಲಿನ ಅಕ್ಷರ ಸಮೃದ್ಧಿಗೆ ಹಲವರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಅವರಲ್ಲಿ ದೇರಾಜೆ ಸೀತಾರಾಮಯ್ಯ, ಕವಿ ಸುಬ್ರಾಯ ಚೊಕ್ಕಾಡಿ ಮೊದಲಾದವರು ಪ್ರಮುಖರು. ಆ ಪರಂಪರೆ ಮುಂದುವರಿದು ಈಗಿನ ಯುವ ತಲೆಮಾರಿನ ಹಲವರು ಈ ಅಕ್ಷರ ತೇರನ್ನು ಮುನ್ನಡೆಸುತ್ತಿದ್ದಾರೆ ಎಂದರು. ಸಾಹಿತ್ಯ ಜ್ಞಾನದ ಲೋಕ. ಸಾಹಿತ್ಯ ಜ್ಞಾನದ ಮಾರ್ಗವಾಗಿಯೇ ಇರಬೇಕು ಹೊರತು ಮನುಷ್ಯನ ಮನಸ್ಸಿನ ವಿಕಾರವನ್ನು ಅಭಿವ್ಯಕ್ತ ಪಡಿಸುವ ಸಾಧನವಾಗಬಾರದು ಎಂಬ ಎಚ್ಚರಿಕೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಈ ರಾಷ್ಟ್ರದ ನಿರ್ಮಾಣ ಕವಿ ಮತ್ತು ಕಲಾವಿದರಿಂದಲೇ ಸಾಧ್ಯ ಎಂಬ ಮಾತನ್ನು ಉಚ್ಚರಿಸಿ ಡಾ.ದೀಪಾ ಪಡ್ಕೆ ಗೋಷ್ಠಿ ಮುಗಿಸಿದರು.

ಡಾ.ದೀಪಾ ಪಡ್ಕೆ
ವೇ. ಮೂ. ಕರುವಜೆ ಕೇಶವ ಜೋಯಿಸ ಅವರು
ವೇದ ಉವಾಚ ಕುರಿತು ಮಾತನಾಡಿದರು.
ಡಾ. ಕಿಶನ್ ರಾವ್ ಬಾಳಿಲ ‘ವೈದ್ಯೋ ನಾರಾಯಣೋ ಹರಿ’ ಎಂಬ ವಿಷಯದಲ್ಲಿ ಮಾತನಾಡಿದರು.
ಮೊದಲ ದಿನ ನೃತ್ಯ,ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ಮನ ಸೆಳೆದವು.
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ಗೌರವಾಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕೇರಿ, ಉಪಾಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಕಾರ್ಯದರ್ಶಿ ಕೃಷ್ಣ ರಾವ್ ನಾವೂರು, ಸಂಘದ ಜತೆ ಕಾರ್ಯದರ್ಶಿಗಳಾದ ಸತೀಶ್ ರಾವ್ ಐ.ಕೆ ದಾಸರಬೈಲು, ಸುಬ್ರಹ್ಮಣ್ಯ ಹೊಳ್ಳ ಎಂ.ಬೈತಡ್ಕ, ಸಮಾವೇಶದ ಸಂಚಾಲಕ ಸಾಯಿನಾರಾಯಣ ಕಲ್ಮಡ್ಕ ಮತ್ತಿತರರು ವಿವಿಧ ಗೋಷ್ಠಿಗಳ ಸಂದರ್ಭದಲ್ಲಿ ಉಪಸ್ಥಿತರಿದ್ದರು.









