ಕಲ್ಮಡ್ಕ:ಸಂಖ್ಯಾ ದೃಷ್ಟಿಯಿಂದ ಕಡಿಮೆಯಿದ್ದರೂ ವಿಪ್ರರನ್ನು ಕಡೆಗಣಿಸಬಾರದು ಎಂದು ಸುಳ್ಯ ತಾಲೂಕು ವಿಪ್ರ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗಿದೆ.ಕಲ್ಮಡದ ಶ್ರೀ ರಾಮ ಮಂದಿರ ಸಭಾಭವನದಲ್ಲಿ ನಡೆದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ಸಮಾರೋಪ ಸಮಾರಂಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ, ಅಶೋಕ್ ಹಾರ್ನಹಳ್ಳಿ ಉಪಸ್ಥಿತರಿದ್ದರು. ದೇಶದ ಅಭಿವೃದ್ಧಿಗೆ ವಿಪ್ರ ಸಮಾಜದ
ಕೊಡುಗೆ ಅಪಾರ. ವಿಪ್ರ ಪ್ರತಿಭೆಗಳನ್ನು ಕಡೆಗಣಿಸುವುದರಿಂದ ದೇಶಕ್ಕೆ ನಷ್ಟವಾಗುತ್ತದೆ. ಆದ್ದರಿಂದ ವಿಪ್ರ ಪ್ರತಿಭೆಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಯಿತು.
ವಿಪ್ರರು ಮೀಸಲಾತಿ ಕೇಳಲಾರರು. ಆದರೆ ಅವರ ಪ್ರತಿಭೆಗೆ ಅನುಗುಣವಾಗಿ ಅವರ ಬಯಕೆಯಂತೆ ಅವಕಾಶಗಳು ದೊರಬೇಕು ಎಂದು ಸಮಾವೇಶವು ಅಭಿಪ್ರಾಯಪಟ್ಟಿತು.
ಸುಳ್ಯ ತಾಲೂಕು ಮಟ್ಟದಲ್ಲಿ ವಿಪ್ರ ಯುವ ವೇದಿಕೆ ಮತ್ತು ವಿಪ್ರ ಮಹಿಳಾ ವೇದಿಕೆ ಆರಂಭಿಸಲು ಇದೇ ಸಂದರ್ಭದಲ್ಲಿ ನಿರ್ಧರಿಸಲಾಯಿತು. ಎರಡೂ ವೇದಿಕೆಯ ಸಂಚಾಲಕರನ್ನಾಗಿ
ಗುರುರಾಜ ಕಲ್ಕಾಡು ಮರ್ಕಂಜ, ಸಾಯಿನಾರಾಯಣ ಕಲ್ಮಡ್ಕ, ಅಖಿಲ್ ಸೋಮಯಾಜಿ, ಡಾ.ವೀಣಾ, ಮಮತಾ ಮೂಡಿತ್ತಾಯ, ಪ್ರಸನ್ನಾ ಭಾರಧ್ವಜ ಅವರನ್ನು ನೇಮಿಸಲಾಯಿತು. ವಿಪ್ರ ಸಮಾಜದ ವಿವಿಧ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ಗೌರವಾಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕೇರಿ, ಉಪಾಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಕಾರ್ಯದರ್ಶಿ ಕೃಷ್ಣ ರಾವ್ ನಾವೂರು, ಸಂಘದ ಜತೆ ಕಾರ್ಯದರ್ಶಿಗಳಾದ ಸತೀಶ್ ರಾವ್ ಐ.ಕೆ ದಾಸರಬೈಲು, ಸುಬ್ರಹ್ಮಣ್ಯ ಹೊಳ್ಳ ಎಂ.ಬೈತಡ್ಕ, ಸಮಾವೇಶದ ಸಂಚಾಲಕ ಸಾಯಿನಾರಾಯಣ ಕಲ್ಮಡ್ಕ ಮತ್ತಿತರರು ಉಪಸ್ಥಿತರಿದ್ದರು.









