ಸುಳ್ಯ: ಸಂಸ್ಕಾರಯುತವಾಗಿ ಬದುಕಿ ಸಮಗ್ರ ಸಮಾಜಕ್ಕೆ ಸಂಸ್ಕಾರ ತುಂಬುವ ಜವಾಬ್ದಾರಿ ವಿಪ್ರ ಸಮಾಜಕ್ಕಿದೆ. ಸಾತ್ವಿಕ ಚಿಂತನೆ ಮತ್ತು ಸತ್ಕಾರ್ಯಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದರು.
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಕಲ್ಮಡ್ಕದ ರಾಮನಗರದ ಶ್ರೀರಾಮ ಭಜನಾ ಮಂದಿರದ ಪಂಚವಟಿ ಸಭಾಭವನದಲ್ಲಿ ನಡೆಯುತ್ತಿರುವ ಎರಡು ದಿನಗಳ ವಿಪ್ರ ಸಮಾವೇಶದ

ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸಮಗ್ರ ತಪಸ್ವಿಗಳ ಸಾಧನೆಯ ಒಟ್ಟು ಮೊತ್ತವೇ ಹಿಂದೂ ಧರ್ಮ. ಹಿಂದೂ ಧರ್ಮದ ತತ್ವಗಳು ಸಾರ್ವಕಾಲಿಕ ಮತ್ತು ಶ್ರೇಷ್ಠ. ಹಿಂದೂ ಧರ್ಮ ಜಗತ್ತಿಗೆ ಒಳಿತನ್ನು ಬಯಸಿ ಮಾರ್ಗದರ್ಶನ ನೀಡುತ್ತದೆ. ಆದುದರಿಂದ ಹಿಂದೂ ಧರ್ಮ ಸಮಗ್ರ ಪ್ರಪಂಚಕ್ಕೆಆದರ್ಶ ಪ್ರಾಯವಾಗಿದೆ ಎಂದು ಹೇಳಿದರು. ನಾವು ಸಂಸ್ಕಾರವನ್ನು ಉಳಿಸಿಕೊಂಡು ಎತ್ತರಕ್ಕೆ ಬೆಳೆಯಬೇಕು ಮತ್ತು ಸಮಗ್ರ ಸಮಾಜವನ್ನು ಎತ್ತರಕ್ಕೆ ಬೆಳೆಸಬೇಕು ಎಂದು ಅವರು ಕರೆ ನೀಡಿದರು. ನಮ್ಮ ಧ್ವನಿಯನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕು ಎಂದ ಅವರು ವಿಪ್ರ ಸಮಾಜದ ಉದ್ದಾರ ಮಾಡುವುದರ ಜೊತೆಗೆ ಸಮಾಜದ ಕುರಿತಾದ ತೆಗಳಿಕೆಯನ್ನು ಖಂಡಿಸಬೇಕಾಗಿದೆ ಎಂದರು. ವಿದ್ಯಾರ್ಥಿಗಳು ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಜಯ ಗಳಿಸುವಂತಾಗಬೇಕು ಎಂದು ಸುಬ್ರಹ್ಮಣ್ಯ ಶ್ರೀಗಳು ಕರೆ ನೀಡಿದರು.

ಸಮಾವೇಶವನ್ನು ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಮಾತನಾಡಿ. ಪ್ರತಿಯೊಬ್ಬರೂ ತಮ್ಮತನ ಉಳಿಸಿಕೊಂಡು ಆತ್ಮಶಕ್ತಿಯನ್ನು ಉದ್ದೀಪನಗೊಳಿಸಬೇಕು. ಸುಸಂಸ್ಕೃತರಾಗಿ, ಸಂಘಟಿತರಾಗಿ ಇತರ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಮಹೇಶ್ ಕಜೆ, ಸುಳ್ಯ ಶಿವಳ್ಳಿ ಸಂಪನ್ನದ ಅಧ್ಯಕ್ಷ ರಾಮಕುಮಾರ್ ಹೆಬ್ಬಾರ್, ಪಂಜ ಸೀಮಾ ಗುರಿಕ್ಕಾರ ಸತ್ಯನಾರಾಯಣ ಮೊಗ್ರ, ಸುಳ್ಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕುಮಾರಸ್ವಾಮಿ ರೆಂಜಾಳ, ಸುಳ್ಯ ಕರಾಡ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಭಟ್ಟ ಡಿ.ಜಾಲ್ಸೂರು, ಸುಳ್ಯ ಕೂಟ ಮಹಾಜಗತ್ತು ಅಧ್ಯಕ್ಷ ಪರಮೇಶ್ವರ ಹೊಳ್ಳ ವಿ., ರಾಮಚಂದ್ರ ಭಟ್ ಬರ್ಲಾಯಬೆಟ್ಟು ಪಂಬೆತ್ತಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಸ್ವಾಗತಿಸಿದರು.ಸಮಾವೇಶದ ಸಂಚಾಲಕ ಸಾಯಿನಾರಾಯಣ ಕಲ್ಮಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೃಷ್ಣ ರಾವ್ ನಾವೂರು ವರದಿ ವಾಚನ ಮಾಡಿ ವಂದಿಸಿದರು.ಶ್ರೀರಕ್ಷಾ, ಪ್ರಶಾಂತ್ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.









