ಬೆಂಗಳೂರು: ಮಳೆಗಾಲದ ವಿಧಾಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಆಗಸ್ಟ್ 22ವರೆಗೆ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಅಣಿಯಾಗಿದ್ದರೆ, ವಿರೋಧ ಪಕ್ಷವನ್ನು ಕಟ್ಟಿಹಾಕುವ ತಂತ್ರವನ್ನು ಸರಕಾರ ಹೆಣೆದಿದೆ.ಜುಲೈನಲ್ಲಿ ನಡೆಯಬೇಕಿದ್ದ
ಅಧಿವೇಶನ ತಡವಾಗಿ ಆರಂಭವಾಗುತ್ತಿದೆ.ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ದುರಂತ, ಮುಂಗಾರು ಹಂಗಾಮಿಗೆ ರಸಗೊಬ್ಬರ ಕೊರತೆ, ಅತಿವೃಷ್ಟಿಯಿಂದ ಕೆಲವೆಡೆ ಆಗಿರುವ ತೊಂದರೆ, ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ಗಳು ತಯಾರಿ ಮಾಡಿಕೊಂಡಿವೆ.
ಇದಕ್ಕೆ, ಪ್ರತಿಯಾಗಿ ಲೋಕಸಭೆ ಚುನಾವಣೆಯಲ್ಲಿ ಮತ ಕಳವು ಆರೋಪ, ಅನುದಾನ ನೀಡಿಕೆಯಲ್ಲಿ ಕೇಂದ್ರದ ತಾರತಮ್ಯ ಮತ್ತಿತರ ವಿಷಯವನ್ನು ಮುಂದು ಮಾಡಿ, ವಿರೋಧ ಪಕ್ಷಗಳಿಗೆ ತಿರುಗೇಟು ನೀಡುವ ಸಿದ್ಧತೆಯನ್ನು ಆಡಳಿತ ಕಾಂಗ್ರೆಸ್ ನಡೆಸಿದೆ.





