ಸುಳ್ಯ:ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದು ನೆಲೆಸಿರುವ ಭಾಷಾ ಅಲ್ಪಸಂಖ್ಯಾತರಿಗೆ ತಮ್ಮ ವರ್ಗದ ಪ್ರಮಾಣ ಪತ್ರ ಸಿಗದ ಸಮಸ್ಯೆ ಇದೆ. ಆದುದರಿಂದ ಭಾಷಾ ಅಲ್ಪ ಸಂಖ್ಯಾತರಿಗೆ ತಮ್ಮ ಕೆಟಗರಿ ನಿರ್ಧರಿಸಿ ಸೂಕ್ತ ಸರ್ಟಿಫಿಕೇಟ್ ನೀಡಲು ಸರಕಾರ ಗಮನ ಹರಿಸಬೇಕು ಎಂದು ಜಾನಪದ ಸಂಶೋಧಕ, ಲೇಖಕ ಡಾ.ಸುಂದರ ಕೇನಾಜೆ ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ
ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಒಂದು ದಿನದ ವಿಚಾರ ಗೋಷ್ಠಿಯಲ್ಲಿ ಅವರು ವಿಚಾರ ಮಂಡಿಸಿ ಮಾತನಾಡಿದರು. ವಿವಿಧ ಭಾಷೆಗಳ ಸಮಸ್ಯೆ, ಸವಾಲು, ಅನನ್ಯತೆಗಳ ಬಗ್ಗೆ ವಿಚಾರ ಮಂಡಿಸಲಾಯಿತು.
8 ಭಾಷೆಗಳ ಕುರಿತು ವಿಚಾರ ಮಂಡಿಸಲಾಯಿತು.ಅರೆಭಾಷೆ ಕುರಿತು ಲೇಖಕಿ ಸ್ಮಿತಾ ಅಮೃತರಾಜ್, ತುಳು ಭಾಷೆಯ ಬಗ್ಗೆ ಡಾ.ಪೂವಪ್ಪ ಕಣಿಯೂರು, ಮಳಯಾಳಂ ಭಾಷೆಯ ಬಗ್ಗೆ ಡಾ.ಸುಂದರ ಕೇನಾಜೆ, ಕೊಂಕಣಿ ಭಾಷೆಯ ಬಗ್ಗೆ ಡಾ.ನಿತಿನ್ ಪ್ರಭು,ಹವ್ಯಕ ಭಾಷೆಯ ಬಗ್ಗೆ ಸಹನಾ ಕಾಂತಬೈಲು,ತಮಿಳು ಭಾಷೆಯ ಬಗ್ಗೆ ಡಾ.ಸೆಲ್ವರತ್ನಂ ಕಂದಡ್ಕ, ಬ್ಯಾರಿ ಭಾಷೆಯ ಬಗ್ಗೆ ಇಸ್ಮತ್ ಪಜೀರ್, ಕೊರಗ ಭಾಷೆಯ ಬಗ್ಗೆ ರಮೇಶ್ ಮಂಚಲ್ಲು ಪ್ರಬಂಧ ಮಂಡಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ವಿಚಾರಗೋಷ್ಠಿ ಉದ್ಘಾಟಿಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಅನುರಾಧಾ ಕುರುಂಜಿ ಸ್ವಾಗತಿಸಿ, ಉಪನ್ಯಾಸಕರಾದ ಡಾ.ಮಮತಾ ಕೆ.ವಂದಿಸಿ, ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.









