ಸುಳ್ಯ: ಸರಕಾರ ವಿವಿಧ ಯೋಜನೆಗಳ ಮೂಲಕ ಸವಲತ್ತುಗಳನ್ನು ವಿತರಿಸುತ್ತದೆ. ಅದನ್ನು ಪಡೆದುಕೊಳ್ಳುವ ಕೆಲಸವನ್ನು ಅರ್ಹ ಫಲಾನುಭವಿಗಳು ಮಾಡಬೇಕು. ಪಡೆದುಕೊಂಡ ಫಲಾನುಭವಿಗಳು ಮುಂದಿನ ವರ್ಷ ಇತರೆ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ತೆಗೆಸಿಕೊಡುವ ಕೆಲಸ ಮಾಡಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇದರ ವತಿಯಿಂದ
ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಬಳಿಕ ಕಛೇರಿಯ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಕಾರದ ಸವಲತ್ತುಗಳು ಎಲ್ಲರಿಗೂ ಹಂಚಿ ಹೋಗಬೇಕು. ಸರಕಾರದ ಯೋಜನೆಗಳನ್ನು ಎಲ್ಲರಿಗೂ ತಿಳಿಸುವ ಕೆಲಸವನ್ನು ಸವಲತ್ತು ಪಡೆದುಕೊಂಡ ಫಲಾನುಭವಿಗಳು ಮಾಡಬೇಕು. ಈ ಮೂಲಕ ಸರಕಾರದ ಯೋಜನೆಗಳು ಸದುಪಯೋಗ ಆಗುವಂತಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಪಶು ಸಂಜೀವಿನಿ ತುರ್ತು ಆರೋಗ್ಯ ವಾಹನದ ವೈದ್ಯಾಧಿಕಾರಿ ಡಾ.ನಾಗರಾಜ್, ಪಶು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ್, ತಾ.ಪಂ. ಮಾಜಿ ಅಧ್ಯಕ್ಷ ಶಂಕರ್ ಪೆರಾಜೆ, ಸುಳ್ಯ ನ.ಪಂ. ಸದಸ್ಯೆ ಶಶಿಕಲಾ ನೀರಬಿದಿರೆ, ಫಲಾನುಭವಿಗಳು, ಇಲಾಖೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಸ್ವಾಗತಿಸಿ, ವಂದಿಸಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಕತ್ತರಿಸುವ ಯಂತ್ರ, ಅಮೃತ ಜೀವನ ಯೋಜನೆಯಡಿ ಹಸು ಘಟಕ ಮಂಜೂರಾತಿ ಪತ್ರ, ಮರಣ ಹೊಂದಿದ ವಿಮೆ ರಹಿತ ಹಸುಗಳಿಗೆ ಸಹಾಯ ಧನವನ್ನು ಫಲಾನುಭವಿಗಳಿಗೆ ಶಾಸಕರು ವಿತರಿಸಿದರು.









