ಸುಳ್ಯ:ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಗರದ ಕಲ್ಲುಮುಟ್ಲುವಿನಲ್ಲಿ ನಿರ್ಮಾಣವಾಗುತ್ತಿರುವ 17 ಕೋಟಿ ವೆಚ್ಚದ ವೆಂಟೆಡ್ ಡ್ಯಾಂ ಕಾಮಗಾರಿ ಕೇವಲ 6 ತಿಂಗಳಲ್ಲಿ ಪೂರ್ಣಗೊಂಡಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ.
ವೆಂಟೆಡ್ ಡ್ಯಾಂ ನಿರ್ಮಣ ಕಾಮಗಾರಿ ದಾಖಲೆ ವೇಗದಲ್ಲಿ ಪೂರ್ತಿಗೊಂಡಿದೆ. 10.5 ಮೀಟರ್ ಎತ್ತರದಲ್ಲಿ ಡ್ಯಾಂ ನಿರ್ಮಾಣವಾಗಿದೆ.11 ಕಾಂಕ್ರೀಟ್ ಕಂಬಗಳು ನಿರ್ಮಾಣವಾಗಿದೆ. 10 ಗೇಟ್ಗಳು ನಿರ್ಮಾಣವಾಗಿದೆ. ಡ್ಯಾಂನ ಮೇಲೆ ಸೇತುವೆ ಮಾದರಿಯಲ್ಲಿ
ರಸ್ತೆ ನಿರ್ಮಿಸಲಾಗಿದೆ. ಗೇಟ್ಗಳು ಹಾಗೂ ಡ್ಯಾಂನ ನಿರ್ವಹಣೆಗಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರಾಯೋಗಿಕವಾಗಿ ಗೇಟ್ ಅಳವಡಿಸಿ ನೀರು ಶೇಖರಣೆ ಮಾಡಲಾಗಿದೆ. ಈ ವರ್ಷ ಪ್ರಯೋಗಿಕವಾಗಿ ಗೇಟ್ ಹಾಕಿ ನೀರು ಸಂಗ್ರಹ ಮಾಡಲಾಗುವುದು. ಮುಂದಿನ ಬೇಸಿಗೆಯಲ್ಲಿ ಡ್ಯಾಂನಲ್ಲಿ ನೀರು ಸಂಗ್ರಹ ನಡೆಯಲಿದೆ.
ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೀರಾ ಹಳೆಯದಾದ ವ್ಯವಸ್ಥೆಯಿಂದಾಗಿ ಕಳೆದ ಹಲವು ವರ್ಷಗಳಿಂದ ಸುಳ್ಯ ನಗರಕ್ಕೆ ನೀರು ಸರಬರಾಜು ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.ಈ ಹಿನ್ನಲೆಯಲ್ಲಿ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡಲು ಶಾಶ್ವತ ಯೋಜನೆ ರೂಪಿಸಲು ವೆಂಟೆಡ್ ಡ್ಯಾಂ ಮತ್ತು ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ 17 ಕೋಟಿ ರೂ ಅನುದಾನ ಮಂಜೂರಾಗಿತ್ತು.ಡಿಸೆಂಬರ್ ತಿಂಗಳಲ್ಲಿ ಮಾಜಿ ಸಚಿವ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ಇದೀಗ ಕೇವಲ 6 ತಿಂಗಳಲ್ಲಿ ವೆಂಟೆಡ್ ಡ್ಯಾಂನ ಕಾಮಗಾರಿ
ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿ ಮುಗಿಸಲು 11 ತಿಂಗಳ ಕಾಲಾವಕಾಶ ಇದ್ದರೂ ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆದಿದೆ.
ಬೇಸಿಗೆಯಲ್ಲಿ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಕಲ್ಲುಮುಟ್ಲುವಿನಲ್ಲಿ ಮರಳು ತುಂಬಿದ ಗೋಣಿ ಚೀಲ ಇರಿಸಿ ತಾತ್ಕಾಲಿಕ ಕಟ್ಟ ನಿರ್ಮಿಸಲಾಗುತ್ತಿತ್ತು. ಇದೇ ಸ್ಥಳದಲ್ಲಿ ಶಾಶ್ವತ ವೆಂಟೆಡ್ ಡ್ಯಾಂ ನಿರ್ಮಾಣಗೊಂಡಿದೆ.
“ಸುಳ್ಯ ಬಹುಕಾಲದ ಬೇಡಿಕೆ ಸುಳ್ಯ ನಗರಕ್ಕೆ ಸಮಗ್ರ ಕುಡಿಯುವ ಯೋಜನೆ ಹಾಗು ವೆಂಟೆಡ್ ಡ್ಯಾಂ ಮಂಜೂರಾಗಿದೆ. ಇದರಲ್ಲಿ ವೆಂಟೆಡ್ ಡ್ಯಾಂ ಕಾಮಗಾರಿ ದಾಖಲೆಯ ವೇಗದಲ್ಲಿ ನಿರ್ಮಾಣ ಆಗಿದ್ದು ಕಾಮಗಾರಿ ಪೂರ್ತಿಯಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ 60 ಕೋಟಿ ರೂ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದ್ದು ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ. ಹಲವು ದಶಕಗಳ ಸುಳ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲಿದೆ.
ವಿನಯಕುಮಾರ್ ಕಂದಡ್ಕ
ಮಾಜಿ ಅಧ್ಯಕ್ಷರು
ನಗರ ಪಂಚಾಯತ್ ಸುಳ್ಯ.