ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರಿನ ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಸಂಭ್ರಮ.12 ವರ್ಷಗಳ ಬಳಿಕ ನಡೆಯುತ್ತಿರುವ 9 ದಿನಗಳ ಮಹಾಮಸ್ತಾಕಾಭಿಷೇಕ ಪೆ.22 ರಂದು ಆರಂಭಗೊಂಡಿದೆ. ಪ್ರಥಮ ದಿನ 108 ಕಲಶದ ಮೂಲಕ 35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಅಭಿಷೇಕ ನಡೆಯಿತು.ಮಹಾ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ. ಮಾರ್ಚ್ 1ರವರೆಗೆ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ
ನಡೆಯಲಿದೆ.ಫಲ್ಗುಣಿ ನದಿ ತೀರದಲ್ಲಿ ವಿರಾಜಮಾನರಾಗಿರುವ
35 ಅಡಿ ಎತ್ತರದ ಏಕಶಿಲಾ ರಚನೆಯ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟ ಅಜಿಲ ವಂಶದ ಇಂದಿನ ಅರಸರಾದ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ನಡೆಯುತಿದೆ. ಮಹಾಮಸ್ತಕಾಭಿಷೇಕ ಮಹೋತ್ಸವದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನದ ಉದ್ಘಾಟನೆ ಭರತೇಶ ಸಮುದಾಯ ಭವನದಲ್ಲಿ ನಡೆಯಿತು.
ಪರಮ ಪೂಜ್ಯ 108 ಶ್ರೀ ಅಮೋಘಕೀರ್ತಿ ಮತ್ತು ಪರಮ ಪೂಜ್ಯ 108 ಶ್ರೀ ಅಮರಕೀರ್ತಿ ಮುನಿ ಮಹಾರಾಜರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸಿರಿ ಬಾಹುಬಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆ ನಡೆಯಿತು. ಮೂಡಬಿದ್ರೆ ಜೈನ ಮಠದ ಡಾ.ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾ ಸ್ವಾಮೀಜಿ ಆಶೀರ್ವಚನಗೈದರು.ಸ್ಥಾಪಕ ವಂಶಿಯ ಅರಸರು ಮತ್ತು ಸಮಿತಿಯ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ಸಮಿತಿಯ ಪ್ರಧಾನ ಸಂಚಾಲಕರು ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ್ ಕಂಬಳಿ, ಶಿವಪ್ರಸಾದ್ ಅಜಿಲರು ಅಳದಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ರಾಂತ ಮುಖ್ಯ ಶಿಕ್ಷಕ ಮುನಿರಾಜ ರಂಜಾಳ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಹಾಗೂ ಮಧ್ಯಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮ, ತೋರಣ ಮುಹೂರ್ತ ನಡೆಯಿತು.ಸಭಾ ಕಾರ್ಯಕ್ರಮದ ನಂತರ ಬಾಹುಬಲಿ ಮೂರ್ತಿಗೆ ಅಭಿಷೇಕ ಜರಗಿತು.