ಸುಳ್ಯ:ಸುಳ್ಯದ ಗೌಡರ ಯುವ ಸೇವಾ ಸಂಘ ಪ್ರವರ್ತಿಸಲ್ಪಡುವ
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬ ಪ್ರಯುಕ್ತ ಕ್ರೀಡಾ ಸಮ್ಮಿಲನ ಹಾಗೂ ಮಲ್ನಾಡ್ ಮಹಾತ್ಮಾಗಾಂಧಿ ಪ್ರೌಢಶಾಲೆಗೆ ನಿರ್ಮಿಸುವ ಎರಡು ಕೊಠಡಿಗಳಿಗೆ ಗುದ್ದಲಿಪೂಜೆ ಫೆ.24ರಂದು ಪೂ.8.30ರಿಂದ ಕೊಡಿಯಾಲಬೈಲು ಎಂಜಿಎಂ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ತಿಳಿಸಿದ್ದಾರೆ. ಸೊಸೈಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ಸಂಸ್ಥೆಯು 25 ವರುಷ ಪೂರೈಸುತ್ತಿರುವ ಈ ಸಂಧರ್ಭದಲ್ಲಿ ಬೆಳ್ಳಿಹಬ್ಬವನ್ನು ಆಚರಿಸಲು ನಿರ್ಧರಿಸಿದ್ದು, ಇದರ ನೆನಪಿಗಾಗಿ ನಮ್ಮ ಶಿಕ್ಷಣ ಸಂಸ್ಥೆಯಾಗಿ ಉತ್ತಮ ಸೇವೆ ನೀಡುತ್ತಿರುವ ಮಹಾತ್ಮಾಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯ ಶಾಲಾ 2 ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು. ಇದರ ಗುದ್ದಲಿಪೂಜೆ ಅಂದು ನಡೆಸಲಾಗುವುದು. ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ, ಇತರೆ ಸಹಕಾರ ಸಂಘಗಳಿಗೆ, ನಮ್ಮ ಸಂಸ್ಥೆಯ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ, ಸಲಹಾ ಸಮಿತಿಯವರಿಗೆ ಹಾಗೂ ಸಿಬ್ಬಂದಿಗಳಿಗೆ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮತ್ತು ಇತರೆ ಸಹಕಾರ ಸಂಘಗಳಿಗೆ

ಹಗ್ಗಜಗ್ಗಾಟ, ಅದೃಷ್ಟ ಪುರುಷ ಮತ್ತು ಅದೃಷ್ಟ ಮಹಿಳೆ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸದಸ್ಯರಿಗೆ ನಿಧಾನ ಬೈಕ್ ಸ್ಕೂಟಿ ಓಡಿಸುವುದು. ಲಕ್ಕಿ ಗೇಮ್, ಗುಂಡೆಸೆತ ಮತ್ತು ಒಂದು ನಿಮಿಷದ ಸ್ಪರ್ಧೆ, ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸಲಹಾ ಸಮಿತಿಯವರಿಗೆ ಹಿರಿಯರ ನಡಿಗೆ ಸ್ಪರ್ಧೆ, ಭಾಷಣ ಸ್ಪರ್ಧೆ, ಲಕ್ಕಿ ಗೇಮ್ ಮತ್ತು ಒಂದು ನಿಮಿಷದ ಸ್ಪರ್ಧೆ, ಸಿಬ್ಬಂದಿಗಳಿಗೆ ಹಗ್ಗಜಗ್ಗಾಟ, ನಿಧಾನ ಬೈಕ್, ಸ್ಕೂಟಿ ಓಡಿಸುವುದು, ಗುಂಡೆಸೆತ ಮತ್ತು ಲಕ್ಕಿ ಗೇಮ್ ಸ್ಪರ್ಧೆ ನಡೆಸಲಾಗುವುದು. ಬೆಳ್ಳಿ ಹಬ್ಬದ ಪ್ರಯುಕ್ತ 25 ಶಾಖೆಗಳನ್ನು ಆರಂಭಿಸಿ ಇದೇ ವರ್ಷ ಮೇ ತಿಂಗಳ ಅಂತ್ಯಕ್ಕೆ ಬೆಳ್ಳಿಹಬ್ಬ ಸಮಾರಂಭವನ್ನು ಅವಿಸ್ಮರಣೀಯವಾಗಿ ಆಚರಿಸಲು ಯೋಜನೆ ರೂಪಿಸಿರುತ್ತೇವೆ.
ಈ ಕ್ರೀಡಾ ಸಮ್ಮಿಲನ ಕಾರ್ಯಕ್ರಮವನ್ನು ಪ್ರಶಸ್ತಿ ಪುರಸ್ಕೃತ ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಪಿ.ಸಿ. ಜಯರಾಮ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು ಮತ್ತು ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಸುಳ್ಯ ಇದರ ಅಧ್ಯಕ್ಷ ಚಂದ್ರಾ ಕೋಲ್ಟಾರ್ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

1998ರಲ್ಲಿ ಸುಳ್ಯದಲ್ಲಿ ಪ್ರಾರಂಭವಾದ ಸಹಕಾರಿ ಸಂಸ್ಥೆ ಸುಳ್ಯದಲ್ಲಿ ಪ್ರಾರಂಭವಾದ ಈ ಸಹಕಾರಿಯು ಪ್ರಸ್ತುತ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಒಟ್ಟು 23 ಶಾಖೆಗಳನ್ನು ತೆರೆದು ಕಾರ್ಯನಿರ್ವಹಿಸುತ್ತಿದೆ. ಪ್ರಾರಂಭದಲ್ಲಿ ಕೇವಲ 430 ಸದಸ್ಯರಿಂದ, ರೂ 5,95 ಲಕ್ಷ ಪಾಲು ಬಂಡವಾಳದಿಂದ ಆರಂಭವಾದ ಸಂಸ್ಥೆ ಈಗ 19,000ಕ್ಕೂ 4.75 ಕೋಟಿ ಪಾಲು ಬಂಡವಾಳಿ, ರೂ 192 ಕೋಟಿ ಠೇವಣಿ ಹಾಗೂ ಸದಸ್ಯರಿಗೆ ವಿವಿಧ ರೂಪದಲ್ಲಿ ರೂ. 182 ಕೋಟಿಗೂ ಮಿಕ್ಕಿ ಸಾಲಗಳನ್ನು ವಿತರಿಸಿರುತ್ತೇವೆ. ಸಂಘದ ದುಡಿಯುವ ಬಂಡವಾಳವು ರೂ.190 ಕೋಟಿಯಷ್ಟಾಗಿರುತ್ತದೆ. ಸಂಸ್ಥೆಯ ವಾರ್ಷಿಕ ವ್ಯವಹಾರವು ರೂ. 900 ಕೋಟಿಗೂ ಮಿಕ್ಕಿದ್ದು, ಠೇವಣಿ ಸಂಗ್ರಹ ಮತ್ತು ವಿವಿಧ ರೀತಿಯ ಸಾಲ ವಿತರಣೆಯಲ್ಲಿ ನಿರಂತರ ಪ್ರಗತಿಯಾಗಿದ್ದು ಪ್ರತಿವರ್ಷ ಲಾಭ ಗಳಿಸಿ, 2022-23ನೇ ಸಾಲಿಗೆ ಸದಸ್ಯರಿಗೆ ಶೇ. 20 ರಷ್ಟು ಡಿವಿಡೆಂಟ್ ವಿತರಿಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮೋಹನ್ರಾಂ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ನಿರ್ದೇಶಕರಾದ ಕೆ.ಸಿ ಸದಾನಂದ, ಪಿ.ಎಸ್. ಗಂಗಾಧರ, ದಿನೇಶ ಮಡಿಪ್ಪಾಡಿ, ದಾಮೋದರ ನಾರ್ಕೋಡು, ಹೇಮಚಂದ್ರ ಐ.ಕೆ, ಜನರಲ್ ಮ್ಯಾನೇಜರ್ ಚಂದ್ರಶೇಖರ ಮೇರ್ಕಜೆ ಉಪಸ್ಥಿತರಿದ್ದರು.









