ಸುಳ್ಯ: ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಹಸಿರುವಾಣಿ ಸಮರ್ಪಣೆ ಮಾಡಿ ಉಗ್ರಾಣ ತುಂಬುವ ಮೂಲಕ ಮಾ.15ರಿಂದ 18ರ ತನಕ ನಡೆಯುವ ನಾಲ್ಕು ದಿನಗಳ ದೈವಂಕಟ್ಟು ಮಹೋತ್ಸವ ವೈಭವ ಆರಂಭಗೊಂಡಿತು.
ಮಾ.15ರಂದು ಶನಿವಾರ ಬೆಳಿಗ್ಗೆ ಹಸಿರುವಾಣಿ ಮೆರವಣಿಗೆ ಅರಂಬೂರು ಶ್ರೀ ಮೂಕಾಂಬಿಕ ಭಜನಾ ಮಂದಿರದ ವಠಾರದಿಂದ ಅರಂಬೂರು ವಯನಾಟ್ ಕುಲವನ್ ದೈವಸ್ಥಾನದ ತನಕ ನಡೆಯಿತು.
ಶ್ರೀ ಮೂಕಾಂಬಿಕ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ

ದೈವಂಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ನಡೆದ ಅದ್ದೂರಿ ಮೆರವಣಿಗೆಗೆ ಚೆಂಡೆ, ವಾದ್ಯ, ಮೇಳಗಳು, ಮುತ್ತುಕೊಡೆಗಳು ಸಾಥ್ ನೀಡಿದವು.ವಿವಿಧ ಕಡೆಗಳಿಂದ ಆಗಮಿಸಿದ ಹಸಿರುವಾಣಿ ಭಜನಾ ಮಂದಿರದಿಂದ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಆಗಮಿಸಿತು. ಆ ಬಳಿಕ ಕ್ಷೇತ್ರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ ಬಳಿಕ ಉಗ್ರಾಣ ತುಂಬಲಾಯಿತು.


ದೈವಂಕಟ್ಟು ಮಹೋತ್ಸವ ಸಮಿತಿ, ಆಡಳಿತ ಸಮಿತಿ ಪದಾಧಿಕಾರಿಗಳು, ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಸೇರಿ ನೂರಾರು ಮಂದಿ ಭಾಗವಹಿಸಿದ್ದರು.
ದೈವಂಕಟ್ಟು ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ತಿಯಾಗಿದೆ. ಸುಳ್ಯ ನಗರ ಸಮೀಪ ಪರಿವಾರ ಕಾನದಿಂದಲೇ ತಳಿರು ತೋರಣಗಳು, ಬಂಟಿಂಗ್ಸ್, ದೈವಗಳ ಆಕರ್ಷಕ ಪ್ಲೆಕ್ಸ್, ಬ್ಯಾನರ್ಗಳು, ಝಗಮಗಿಸುವ ಲೈಟಿಂಗ್ಸ್ಗಳಿಂದ ಅಲಂಕಾರ ಮಾಡಲಾಗಿದೆ. ಅಲ್ಲಲ್ಲಿ ತಲೆ ಎತ್ತಿರುವ ದ್ವಾರಗಳು ಸ್ವಾಗತ ಕಮಾನುಗಳು, ದೈವಗಳ ಚಿತ್ರಗಳು


ಅತ್ಯಾಕಕರ್ಷಕವಾಗಿ ಮೂಡಿ ಬಂದಿದ್ದು ಜನ ಮನ ಸೆಳೆಯುತಿದೆ. ದಾರಿಯುದ್ದಕ್ಕೂ ಆಕರ್ಷಕವಾಗಿ ಶೃಂಗಾರಗೊಂಡಿದೆ. ದೈವಂಕಟ್ಟು ಉತ್ಸವಕ್ಕೆ ಮರಕ್ಕಳ, ಉಗ್ರಾಣ ವ್ಯವಸ್ಥೆ, ಕಾರ್ಯಾಲಯ, ಭಕ್ತರಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಲಂಕಾರ ಕೆಲಸಗಳು ಸೇರಿದಂತೆ ವಿವಿಧ ಸಿದ್ಧತೆಗಳನ್ನು ನಡೆಸಲಾಗಿದೆ.
ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಪರಿಧಿಯಲ್ಲಿ ಬರುವ ಸುಳ್ಯ ಪ್ರಾದೇಶಿಕ ಸಮಿತಿ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಸುಮಾರು 300 ವರ್ಷಗಳ ಬಳಿಕ ಇಲ್ಲಿ ದೈವಂಕಟ್ಟು ಉತ್ಸವ ನಡೆಯುತಿದೆ.


