ಪೆರಾಜೆ:ಆಚಾರ ಇಲ್ಲದ ವ್ಯಕ್ತಿತ್ವ ಮತ್ತು ಸಂಪತ್ತು ವ್ಯರ್ಥ. ಆದುದರಿಂದ ಆಚಾರ ಜೀವನದಲ್ಲಿ ಬಹಳ ಮುಖ್ಯವಾದುದು ಎಂದು ಶ್ರೀ ಕ್ಷೇತ್ರ ನೀಲೇಶ್ವರದ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹೇಳಿದ್ದಾರೆ. ಕೊಡಗು ಮತ್ತು ದಕ್ಷಿಣ ಕೊಡಗು ಜಿಲ್ಲೆಯ ಗಡಿ ಪ್ರದೇಶವಾದ ಪೆರಾಜೆ ಗ್ರಾಮದ ಕುಂಬಳಚ್ಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ವಿಚಾರಗಳು ಪ್ರಕಟವಾಗುವುದು
ನಮ್ಮ ಆಚಾರಗಳ ಮೂಲಕ. ನಮ್ಮ ಆಚಾರದ ಆಧಾರದಲ್ಲಿ ವಿಚಾರಗಳು ಹೊರ ಬರುತ್ತದೆ. ದೇಹದ ಭಾಷೆ ಪ್ರಮುಖವಾದುದು. ದೇಹದ ಭಾಷೆ, ನಮ್ಮ ಆಚಾರ, ವಿಚಾರಗಳು ವ್ಯಕ್ತಿತ್ವವನ್ನು ರೂಪಿಸುತ್ತದೆ. ಗುಣ ಕರ್ಮಕ್ಕನುಸಾರವಾಗಿ ಪ್ರತಿಯೊಬ್ಬರೂ ಶ್ರೇಷ್ಠರಾಗುತ್ತಾರೆ ಎಂದು ಅವರು ಹೇಳಿದರು. 64 ಕ್ಷೇತ್ರ ಕಲೆಗಳಿಂದ ತುಂಬಿದ ಶ್ರೀಮಂತ ದೇಶ ಭಾರತ.64 ಕ್ಷೇತ್ರ ಕಲೆಗಳು ಸಂಯೋಜನೆಗೊಂಡಾಗ ಕ್ಷೇತ್ರಗಳು ನಿರ್ಮಾಣವಾಗುತ್ತದೆ ಎಂದ ಅವರು ಧರ್ಮ ಬದುಕಿನ ಅವಿಭಾಜ್ಯ ಅಂಗ, ಮನುಷ್ಯತ್ವ ಬಹಳ ಮುಖ್ಯ. ಧರ್ಮದ ಆಚರಣೆಯು ಮನುಷ್ಯತ್ವವನ್ನು ಕಲಿಸುತ್ತದೆ. ಜ್ಞಾನ ವ್ಯಕ್ತಿತ್ವವನ್ನು ಬೆಳೆಸುತ್ತದೆ,ಉತ್ತಮ ವ್ಯಕ್ತಿತ್ವ ಸಾಮಾಜಿಕ ಮತ್ತು ಧಾರ್ಮಿಕ ಭದ್ರತೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಮಾತನಾಡಿ ಭಕ್ತಿ ಹಾಗು ನಂಬಿಕೆಗಳು ಭಾಷೆ, ಪ್ರದೇಶವನ್ನು ಮೀರಿ ನಮ್ಮ ಭಾವನೆಗಳನ್ನು ಒಂದಾಗಿಸುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಭಾವನೆಯಲ್ಲಿ ಎಲ್ಲರೂ ಒಂದಾಗಿರುವ ಕಾರಣ ನಮ್ಮ ಧಾರ್ಮಿಕ ಆಚರಣೆಗಳು ಗಟ್ಟಿಯಾಗಿದೆ ಮತ್ತು ಪ್ರದೇಶದ ಅಭಿವೃದ್ಧಿ ಸಾಧ್ಯವಾಗಿಸಿದೆ ಎಂದು ಹೇಳಿದರು.
ದೈವಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅಧ್ಯಕ್ಚತೆ ವಹಿಸಿದ್ದರು. ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗು ದೈವಕಟ್ಟು ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿತೇಂದ್ರ ನಿಡ್ಯಮಲೆ, ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕುಂಞಿಕಣ್ಣನ್ ಬೇಡಗಂ, ಕ್ಷೇತ್ರದ ಪ್ರಧಾನ ಸ್ಥಾನಿಕರಾದ ಸತ್ಯನ್ ಕಾರ್ನೋರಚ್ಚನ್, ದೇವತಕ್ಕರಾದ ರಾಮಕಜೆ ರಾಜಗೋಪಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಉದಯಚಂದ್ರ ಕುಂಬಳಚೇರಿ ಸ್ವಾಗತಿಸಿ, ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈವಕಟ್ಟು ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ ವಂದಿಸಿದರು. ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು. ಹೊನ್ನಪ್ಪ ಕೊಳಂಗಾಯ, ಪದ್ಮಯ್ಯ ಕುಂಬಳಚೇರಿ, ಸತ್ಯನ್ ಕಾರ್ನೋರಚ್ಚನ್ ಅವರನ್ನು ಪೆರಾಜೆ ಶಾಸ್ತಾವು ದೇವಸ್ಥಾನದ ಪರವಾಗಿ ಆಡಳಿತ ಜಿತೇಂದ್ರ ನಿಡ್ಯಮಲೆ ಸನ್ಮಾನಿಸಿ ಗೌರವಿಸಿದರು.
ಶಾಸಕ ಕೆ.ಜಿ.ಬೋಪಯ್ಯ ಭೇಟಿ:
ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಬೆಳಿಗ್ಗೆ ಕುಂಬಳಚ್ಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನಕ್ಕೆ ಭೇಟಿ ನೀಡಿದ್ದರು.