ಸುಳ್ಯ:ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.3ರಿಂದ 5ರವರೆಗೆ ಮೂರು ದಿನಗಳ ಕಾಲ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ನಡೆಯಲಿದೆ. ಇಲ್ಲಿ ಪ್ರಥಮ ಬಾರಿಗೆ ನಡಯುವ ಮಹೋತ್ಸವಕ್ಕೆ ಅದ್ದೂರಿ ಸಿದ್ಧತೆ ನಡೆಸಲಾಗಿದೆ ಎಂದು ದೈವಕಟ್ಟು ಮಹೋತ್ಸವ ಸಮಿತಿ ಹಾಗು ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೈವಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಮಾಹಿತಿ ನೀಡಿ ‘ಮಾ.3ರಂದು ಬೆಳಗ್ಗೆ ಶ್ರೀ ಶಾಸ್ತಾವು ದೇವಸ್ಥಾನ

ಪೆರಾಜೆಯಿಂದ ಹಸಿರುವಾಣಿ ಮೆರವಣಿಗೆ ಹೊರಡುವುದು. ಬಳಿಕ ಉಗ್ರಾಣ ಮುಹೂರ್ತ (ಕಲವರ ನಿರಕ್ಕಲ್) ನಡೆಯುವುದು.ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ಅಂದು ಸಂಜೆಯಿಂದ ದೈವಿಕ ಕಾರ್ಯಕ್ರಮಗಳು ಆರಂಭಗೊಳ್ಳುವುದು. ರಾತ್ರಿ ಕೈವಿದ್, ದೈವಗಳ ಕೂಡುವಿಕೆ, ಶ್ರೀ ಪೊಟ್ಟನ್ ದೈವ ನಡೆಯುವುದು. ಮಾ.4ರಂದು ಶನಿವಾರ ಬೆಳಗ್ಗೆಯಿಂದ ದೈವಗಳ ಮಹೋತ್ಸವ ನಡೆಯಲಿದ್ದು ಬೆಳಗ್ಗೆ 7ರಿಂದ ಕೊರತಿಯಮ್ಮ ದೈವ, ಚಾಮುಂಡಿ ದೈವ, ಬಳಿಕ ವಿಷ್ಣುಮೂರ್ತಿ ದೈವ, ಮಧ್ಯಾಹ್ನ ಗುಳಿಗ ದೈವದ ಕೋಲ, ಸಂಜೆ 3 ರಿಂದ ಕಾರ್ನೋನ್ ದೈವದ ವೆಳ್ಳಾಟ್ಟಂ, ಕೋರಚ್ಛನ್ ದೈವದ ವೆಳ್ಳಾಟ್ಟಂ, ರಾತ್ರಿ ಕಂಡನಾರ್ ಕೇಳನ್ ದೈವದ ವೆಳ್ಳಾಟ್ಟಂ, ವಿಷ್ಣುಮೂರ್ತಿ ದೈವದ ಆರಂಭ, ರಾತ್ರಿ 1ಗಂಟೆಗೆ ವಯನಾಟ್ ಕುಲವನ್ ದೈವದ ವೆಳ್ಳಾಟ್ಟಂ ನಡೆಯಲಿದೆ. ಮಾ.5ರಂದು ಬೆಳಗ್ಗೆ 7ರಿಂದ ಕಾರ್ನೊನ್ ದೈವ, 9 ರಿಂದ ಕೊರಚ್ಛನ್ ದೈವ, 11 ರಿಂದ
ಕಂಡನಾರ್ ಕೇಳನ್ ದೈವ, ಅಪರಾಹ್ನ 2 ರಿಂದ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ, ಅಪರಾಹ್ನ 3 ರಿಂದ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ, ರಾತ್ರಿ ಮರ ಪಿಳರ್ಕಲ್, ನಂತರ ಕೈವೀದ್ ನಡೆಯುವುದು ಎಂದು ಅವರು ವಿವರ ನೀಡಿದರು.
ನಿರಂತರ ಅನ್ನದಾನಮೂರು ದಿನಗಳ ಕಾಲ ನಡೆಯಲಿದೆ ಎಂದು ವಿವರಿಸಿದರು.

10 ವರ್ಷದ ಹಿಂದೆ ಪುನರ್ ಪ್ರತಿಷ್ಠೆ:
ಪೆರಾಜೆ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಮತ್ತು ಪೆರಾಜೆ ಪರಿಸರದ ಎಲ್ಲಾ ಮನೆಗಳಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಪೆರಾಜೆಯಲ್ಲಿ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರ ಆಗಬೇಕೆನ್ನುವುದು ಕಂಡು ಬಂದಿತ್ತು.ಅದರಂತೆ 10 ವರ್ಷಗಳ ಹಿಂದೆ ಜೀರ್ಣೋದ್ಧಾರ ಕಾರ್ಯಗಳು ನಡೆದಿದೆ. 2012ರಲ್ಲಿ ಪುನರ್ ಪ್ರತಿಷ್ಠೆಯು ನಡೆಯಿತು. ಆ ಬಳಿಕ ದೈವಕಟ್ಟು ಮಹೋತ್ಸವ ನಡೆಸಬೇಕೆನ್ನುವುದು ಪೆರಾಜೆ ಗ್ರಾಮಸ್ಥರ ಆಶಯವಾಗಿತ್ತು. ಅದರಂತೆ ಸಭೆ ನಡೆಸಿ ಸಮಿತಿಯನ್ನು ರಚಿಸಿಕೊಂಡು ಇದೀಗ ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೊನ್ನಪ್ಪ ಕೊಳಂಗಾಯ ಅವರು ಹೇಳಿದರು.

ಧಾರ್ಮಿಕ ಸಭೆ:
ಮಾ.3ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆಯು ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ನೀಲೇಶ್ವರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡುವರು. ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಕೊಡಗು – ಮೈಸೂರು ಸಂಸದ ಪ್ರತಾಪಸಿಂಹ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಮಡಿಕೇರಿ ತಾಲೂಕು ಅಕ್ರಮ – ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಸಮಿತಿ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ತಂಬುರಾಟಿ ಭಗವತೀ ಕ್ಷೇತ್ರ ಕುತ್ತಿಕೋಲು ಆಡಳಿತ ಸಮಿತಿ ಅಧ್ಯಕ್ಷ ಕುಂಞಿಕಣ್ಣ ಬೇಡಗಂ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿವಾಕರ ರೈ ಪೆರಾಜೆ ಭಾಗವಹಿಸಲಿದ್ದಾರೆ.

50 ಸಾವಿರಕ್ಕೂ ಮಿಕ್ಕಿ ಜನರ ನಿರೀಕ್ಷೆ:ಪದ್ಮಯ್ಯ ಕುಂಬಳಚೇರಿ
ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಮಾತನಾಡಿ
3 ದಿನಗಳ ದೈವಕಟ್ಟು ಮಹೋತ್ಸದ ಸಂದರ್ಭದಲ್ಲಿ 50 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.ಇದಕ್ಕಾಗಿ ವಿಶಾಲವಾದ ವ್ಯವಸ್ಥೆ ಮಾಡಲಾಗಿದೆ.ಪಾರ್ಕಿಂಗ್ಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಈ ಉತ್ಸವದ ಸಂದರ್ಭದಲ್ಲಿ ಬೆಳಗ್ಗೆ ಉಪಹಾರ, ಹಾಗೂ, ಮಧ್ಯಾಹ್ನ, ರಾತ್ರಿ ಅನ್ನದಾನ ಸೇವೆ ನಡೆಯುವುದು ಎಂದು ಹೇಳಿದರು. ಶ್ರಮದಾನದ ಮೂಲಕ ಹಲವು ಕೆಲಸಗಳನ್ನು ಮಾಡಲಾಗಿದೆ.ಮಹೋತ್ಸವದ ಯಶಸ್ವಿಗೆ ಊರಿನ ಜನರು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದೈವಕಟ್ಟು ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಸಂಘಟನಾ ಕಾರ್ಯದರ್ಶಿ ಉದಯ ಕುಂಬಳಚೇರಿ, ಪ್ರಚಾರ ಸಮಿತಿ ಅಧ್ಯಕ್ಷ ಅರುಣ್ ಮಜಿಕೋಡಿ, ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಮಜಿಕೋಡಿ ,ಪ್ರಚಾರ ಸಮಿತಿ ಸದಸ್ಯ ಸತೀಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು.