ಸುಳ್ಯ:ಕಲಿಯುಗದ ಪ್ರತ್ಯಕ್ಷ ದೈವನೆನಿಸಿದ ಶ್ರೀ ವಯನಾಟ್ ಕುಲವನ್ ಕೋಲ ರೂಪದಲ್ಲಿ ಅವತರಿಸಿ ನೆರೆದ ಸಾವಿರಾರು ಭಕ್ತರನ್ನು ಹರಸಿತು. ನೆರೆದ ಭಕ್ತ ಸಮೂಹ ಭೂಮಿಯಲ್ಲಿ ಅವತರಿಸಿದ ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವವನ್ನು ಕಣ್ತುಂಬಿಕೊಂಡು ಕೃತಾರ್ಥರಾದರು. ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕೊಲ ನಡೆಯುವುದರೊಂದಿಗೆ
ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ

ಮೂರು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಸಂಪನ್ನಗೊಂಡಿತು.ಮಾ.5ರಿಂದ ಆರಂಭಗೊಂಡು ಮೂರು ದಿನಗಳ ಕಾಲ ವಿವಿಧ ದೈವಗಳು ಕೋಲ ರೂಪದಲ್ಲಿ ವಿಜ್ರಂಭಿಸಿ ಭಕ್ತರನ್ನು ಭಕ್ತಿ ಭಾವದ ಸಂಭ್ರಮದಲ್ಲಿ ತೇಲಾಡಿಸಿತು.ಒಂದು ಶತಮಾನದ ಬಳಿಕ ನಡೆದ ದೈವಂಕಟ್ಟು ಮಹೋತ್ಸವ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕೇರಳ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರ ಗಡಣವೇ ಆಗಮಿಸಿ ಉತ್ಸವಕ್ಕೆ ಸಾಕ್ಷಿಯಾದರು.

ಮಾ.7ರಂದು ಬೆಳಗ್ಗಿನಿಂದ ಕೊರಚ್ಛನ್ ದೈವ, ಅತ್ಯಂತ ವಿಶೇಷವಾದ ಕಂಡನಾರ್ ಕೇಳನ್ ದೈವಗಳು ನಡೆದು ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ನಡೆಯಿತು. ಚೆಂಡೆ ಮೇಳದ ಅಬ್ಬರದ ಮಧ್ಯೆ ವೈಭವೋಪೇತವಾಗಿ ಅಂಗಣ ಪ್ರವೇಶಿಸಿದ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ಮಾಡಿ ಭಕ್ತ ಸಮೂಹವನ್ನು ಹರಸಿತು. ವಯನಾಟು ಕುಲವನ್ ದೈವ- ವಿಷ್ಣುಮೂರ್ತಿ ದೈವಗಳ ಸಮಾಗಮಕ್ಕೂ ದೈವಸ್ಥಾನದ ಅಂಗಣ ಸಾಕ್ಷಿಯಾಯಿತು. ರಾತ್ರಿ ದೈವಂಕಟ್ಟು ಮಹೋತ್ಸವಕ್ಕೆ ಸಮಾಪ್ತಿಯಾಗಿ ಮರ ಪಿಳರ್ಕಲ್ ನಡೆಯುತು. ಕೈವೀದ್ನೊಂದಿಗೆ ಉತ್ಸವಕ್ಕೆ ತೆರೆಯಾಯಿತು.

ಮಹೋತ್ಸವ ಸಮಿತಿ ಅಧ್ಯಕ್ಷ ಗುಡ್ಡಪ್ಪ ರೈ ಮೇನಾಲ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪರಿವಾರಕಾನ,ಶ್ರೀಕ್ಷೇತ್ರ ಕುತ್ತಿಕೊಲು ಅಧ್ಯಕ್ಷ ಆರ್.ಕುಂಞಿಕಣ್ಣನ್, ಮಹೋತ್ಸವ ಸಮಿತಿಯ
ಸಂಘಟನಾ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕೋಶಾಧಿಕಾರಿ ರಾಮಕೃಷ್ಣ ರೈ ಮೇನಾಲ, ಸಂಚಾಲಕರಾದ ಸುಬೋದ್ ಶೆಟ್ಟಿ ಮೇನಾಲ, ಕಾರ್ಯಾಧ್ಯಕ್ಷರಾದ ರವೀಂದ್ರನಾಥ ರೈ ಮೇನಾಲ, ಜಗನ್ನಾಥ ರೈ ಮೇನಾಲ ಮುಂಬೈ, ಹರಿಪ್ರಕಾಶ್ ಗೌಡ ಕುರುಂಜಿ, ವಿಜಯಕುಮಾರ್ ತುದಿಯಡ್ಕ, ಸ್ಥಾನದ ಮನೆ ಅರ್ಚಕರಾದ ಯಂ.ಕೆ.ಕೃಷ್ಣ, ಪದಾಧಿಕಾರಿಗಳು, ಸಂಚಾಲಕರುಗಳು, ಸದಸ್ಯರುಗಳು, ಗ್ರಾಮಸ್ಥರು, ಮಹೋತ್ಸವ ಸಮಿತಿ, ಉಪಸಮಿತಿ, ಆಡಳಿತ ಸಮಿತಿ ಪದಾಧಿಕಾರಿಗಳು, ಮೇನಾಲ ಕುಟುಂಬಸ್ಥರು ಮತ್ತು ಪ್ರಮುಖರು ಉತ್ಸವದ ನೇತೃತ್ವ ವಹಿಸಿದ್ದರು.















