ಬನಾರಿ:ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 79 ನೇ ವಾರ್ಷಿಕೋತ್ಸವ, ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ
ಪ್ರದಾನ, ನೃತ್ಯ ವೈವಿಧ್ಯ ಭಜನೆ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಡಿ.23 ಶನಿವಾರ (ಇಂದು) ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ದಿನಪೂರ್ತಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ ನಡೆಯಲಿದೆ.ಪೂರ್ವಾಹ್ನ 9:30 ರಿಂದ
ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ
ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬನಾರಿ ಮತ್ತು ಶ್ರೀ ವಾಗ್ಲೆವಿ ಭಜನಾ ಮಂಡಳಿ ಕಾವು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಪೂರ್ವಾಹ್ನ ಗಂಟೆ 11:15 ರಿಂದ ಸಂಘದ ಮಹಿಳಾ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಸಮರ ಸನ್ನಾಹ’ ನಡೆಯಲಿದೆ. ಅಪರಾಹ್ನ 12:15 ರಿಂದ ದೇಲಂಪಾಡಿ ಶಾಲಾ ಮಕ್ಕಳಿಂದ ‘ನೃತ್ಯ ವೈವಿಧ್ಯ’ 12: 45 ರಿಂದ ಬನಾರಿ ಅಂಗನವಾಡಿಯ ಪುಟಾಣಿಗಳಿಂದ ‘ಚಿಣ್ಣರ ಚಿಲಿಪಿಲಿ’ ನಡೆಯಲಿದೆ.
ಕೀರಿಕ್ಕಾಡು ಸಂಸ್ಮರಣೆ-ಪ್ರಶಸ್ತಿ ಪ್ರದಾನ:
ಅಪರಾಹ್ನ 2 ರಿಂದ ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ನಿವೃತ್ತ ಪ್ರಾಂಶುಪಾಲರಾದ ರಾಜೇಂದ್ರ ಕಲ್ಲೂರಾಯ ಎಡನೀರು ಅಧ್ಯಕ್ಷತೆ ವಹಿಸುವರು. ಹಿರಿಯ ಕವಯಿತ್ರಿ ಸತ್ಯವತಿ ಎಸ್ ಭಟ್ ಕೊಳಚೆಪ್ಪು ಅವರು ಕೀರಿಕ್ಕಾಡು ಸಂಸ್ಮರಣೆ ಮಾಡುವರು.
ಖ್ಯಾತ ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಅವರ ಸಂಸ್ಮರಣಾರ್ಥ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಅರ್ಥಧಾರಿಗಳು, ಸಾಹಿತಿ ಮತ್ತು ವಿಮರ್ಶಕರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡುವರು.
ಮಣಿಯಾರು ಶ್ರೀ ಶಾಸ್ತಾರ ದೇವಸ್ಥಾನದ ಮೊಕ್ತಸರರಾದ ಎ. ನಾರಾಯಣ ನಾಯ್ಕ್ ಊಜಂಪಾಡಿ ಗೌರವ ಉಪಸ್ಥಿತರಿರುವರು.
ಅಪರಾಹ್ನ ಗಂಟೆ 4ರಿಂದ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ‘ವಿಭೀಷಣ ನೀತಿ’ ಜರುಗಲಿದೆ.
ರಾತ್ರಿ 7ರಿಂದ ನೃತ್ಯಗುರುಗಳಾದ ಸರೋಜಿನಿ ಬನಾರಿ ಅವರ ನಿರ್ದೇಶನದಲ್ಲಿ ಸಂಘದ ಉದಯೋನ್ಮುಖ ಪ್ರತಿಭೆಗಳಿಂದ ಯಕ್ಷಗಾನ ಬಯಲಾಟ ‘ಶಕಟಾಸುರ ವಧೆ’, ‘ತರಣಿಸೇನ ಕಾಳಗ’, ‘ಗಿರಿಜಾ ಕಲ್ಯಾಣ’ ನಡೆಯಲಿದೆ ಎಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












