ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿನ ಐದು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದಿಂದ ಮಂಗಳವಾರ ಒಂದೇ ಬಾರಿಗೆ ಚಾಲನೆ ನೀಡಿದರು.ಕರ್ನಾಟಕದ ‘ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್‘, ಮಧ್ಯಪ್ರದೇಶದ ‘ರಾಣಿ ಕಮಲಾಪತಿ ಭೋಪಾಲ್-
ಜಬಲ್ಪುರ ವಂದೇ ಭಾರತ್ ಎಕ್ಸ್ಪ್ರೆಸ್’, ‘ಖಜುರಾಹೋ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್ಪ್ರೆಸ್’, ಗೋವಾದ ‘ಮಡಗಾಂವ್-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್’, ಮತ್ತು ಬಿಹಾರದ ‘ಹಟಿಯಾ-ಪಟ್ನಾ ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿಗೆ ಮೋದಿ ಚಾಲನೆ ನೀಡಿದರು. ಮೋದಿ ಅವರು ಮಂಗಳವಾರ ಬೆಳಿಗ್ಗೆ ಭೋಪಾಲ್ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಭೋಪಾಲ್-ಜಬಲ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಉಳಿದ ನಾಲ್ಕು ರೈಲುಗಳಿಗೆ ವಿಡಿಯೊ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು.
ಈ ವೇಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇದ್ದರು. ಧಾರವಾಡದಿಂದಲೂ ಕರ್ನಾಟಕದ ಎರಡನೇ ವಂದೇ ಭಾರತ್ ರೈಲಿಗೆ ಇಂದು ಚಾಲನೆ ನೀಡಲಾಯಿತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈ ವೇಳೆ ಧಾರವಾಡದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿದರು. ರೈಲು ದಾವಣಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳಿತು.