ಹರಾರೆ: 19 ವರ್ಷದೊಳಗಿನವರ ಏಕದಿನ ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡದ ತಾರೆ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇಂಗ್ಲೆಂಡ್ ಬೌಲರ್ಗಳ ಮೇಲೆ ಸವಾರಿ ಮಾಡಿದ ಅವರು ಅಂಡರ್19 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತೀ ವೇಗದ ಶತಕ ಸಿಡಿಸಿದ ದಾಖಲೆ ಬರೆದರು. ಈ ಮೂಲಕ 19 ವರ್ಷದೊಳಗಿನ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ
ಭಾರತ ಬೃಹತ್ ಮೊತ್ತ ದಾಖಲಿಸಿದೆ.ಮೊದಲು ಬ್ಯಾಟ್ ಮಾಡಿದ ಭಾರತದ ಯುವ ಪಡೆ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿ ಇಂಗ್ಲೆಂಡ್ಗೆ 412 ರನ್ ಗುರಿ ನೀಡಿದೆ. ವೈಭವ್, ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದರು. ಆದರೆ, ಅಂತಿಮವಾಗಿ ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿದರು. ಆ ಮೂಲಕ

19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡರು. ಅಂತಿಮವಾಗಿ ಅವರು, 80 ಎಸೆತಗಳಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್ ಸಹಿತ 175 ರನ್ ಸಿಡಿಸಿ ಔಟ್ ಆದರು.
32 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ವೈಭವ್ 55 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ನಾಯಕ ಆಯುಷ್ ಮಾತ್ರೆ 53, ಅಭಿಗ್ಯಾನ್ ಕುಂಡು 40, ವೇದಾಂತ್ ತ್ರಿವೇದಿ 32, ವಿಹಾನ್ ಮಲ್ಹೋತ್ರ 30, ಕನಿಷ್ಕ್ ಚೌಹಾನ್ 37 ಉತ್ತಮ ಕೊಡುಗೆ ನೀಡುವ ಮೂಲಕ ಸ್ಕೋರ್ 400 ರ ಗಡಿ ದಾಟಿಸಿದರು.







