ದುಬೈ:ಭಾರತ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದ್ದಾರೆ.ಯುಎಇ ವಿರುದ್ಧ ಆರಂಭವಾಗಿರುವ 19 ವರ್ಷದೊಳಗಿನವರ ಏಕದಿನ ಮಾದರಿಯ ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 56 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಶತಕದ ಬಳಿಕ ಇನ್ನಷ್ಟು ಅಬ್ಬರದ ಬ್ಯಾಟಿಂಗ್ ನಡೆಸಿದ ವೈಭವ್, ಅಂತಿಮವಾಗಿ 95 ಎಸೆತಗಳಲ್ಲಿ 171 ರನ್ ಸಿಡಿಸಿದರು. ಇವರ ಶತಕದ ನೆರವಿನಿಂದ
ಭಾರತ ಯುವ ತಂಡ ಬೃಹತ್ ಮೊತ್ತ ದಾಖಲಿಸಿದೆ. ಭಾರತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 433 ರನ್ ಗಳಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಆಯುಷ್ ಮ್ಹಾತ್ರೆ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ, ಆರೋನ್ ಜಾರ್ಜ್ ಜೊತೆಗೂಡಿದ ವೈಭವ್ ಸೂರ್ಯವಂಶಿ ಯುಎಇ ಬೌಲರ್ಗಳ ಬೆಂಡೆತ್ತಿದರು. ತಮ್ಮ ಸ್ಫೋಟಕ ಇನಿಂಗ್ಸ್ನಲ್ಲಿ 14 ಸಿಕ್ಸರ್ ಹಾಗೂ 9 ಅಮೋಘ ಬೌಂಡರಿ ಸಿಡಿಸಿ 171ರನ್ ಗಳಿಸಿ ಔಟ್ ಆದರು.
ಇತ್ತೀಚೆಗೆ ಮುಕ್ತಾಯಗೊಂಡ ರೈಸಿಂಗ್ ಸ್ಟಾರ್ ಏಷ್ಯಾ ಕಪ್ ಟಿ20 ಮಾದರಿಯ ಟೂರ್ನಿಯಲ್ಲಿ ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿದ್ದ ವೈಭವ್, ಇದೀಗ 19 ವರ್ಷದೊಳಗಿನವರ ಏಕದಿನ ಮಾದರಿಯ ಏಷ್ಯಾಕಪ್ನಲ್ಲೂ ಸ್ಫೋಟಕ ಶತಕ ಸಿಡಿಸಿದ್ದಾರೆ.













