*ಎಂ.ನಾ.ಚಂಬಲ್ತಿಮಾರ್.
ಫರಂಗಿಗಳ ಫಿರಂಗಿಗೆ ಎದೆಯೊಡ್ಡಿ ಹೋರಾಡಿದ ಉಳ್ಳಾಲದ ವೀರರಾಣಿ ಅಬ್ಬಕ್ಕನ ನೆಲದ ಶಾಸಕ,ಮಾಜಿ ಮಂತ್ರಿ ಯು. ಟಿ. ಖಾದರ್ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆಗಿದ್ದಾರೆನ್ನುವುದು ಮಹತ್ವದ ಮತ್ತು ಕೌತುಕದ ಬೆಳವಣಿಗೆ. ಅವರಿಗೆ ಹೃದಯಸ್ಪರ್ಶಿ ಅಭಿನಂಧನೆಗಳು.
ಈ ಹಿಂದೆ ಆರೋಗ್ಯ ಸಚಿವರಾಗಿ ಜನಪ್ರಿಯರಾಗಿದ್ದ ಅವರಿಗೆ ಈ ಬಾರಿ ಮಹತ್ವದ ಖಾತೆಯನ್ನೇ ನಿರೀಕ್ಷಿಸಲಾಗಿತ್ತು. ಆದರೆ ಕಾಕತಾಳೀಯ ಸದನದ ಅಧ್ಯಕ್ಷತೆಯೆಂಬ “ಸ್ಪೀಕರ್” ಗೌರವ ಒಲಿದಿದೆ.
ಇದು ತೂಕದ, ಕಾನೂನು ಅರಿವುಗಳಿರಬೇಕಾದ ಶಾಸನಾಂಗ
ನಿರ್ವಹಣೆಯ ಜಾಗ. ಈ ಜಾಗದಲ್ಲವರು ಹೇಗೆ ನಿರ್ವಹಿಸುತ್ತಾರೆನ್ನುವುದು ಮುಖ್ಯ. ಇಲ್ಲೂ ಯಶಸ್ವಿ ಆದರೆ ಭವಿಷ್ಯದ ನಡಿಗೆ ಇನ್ನೂ ಎತ್ತರಕ್ಕೆ ಮು. ಮಂತ್ರಿ ಪದವಿಯ ಕಡೆಗೆ ಎಂಬುದು ರಾಜಕೀಯ ಭವಿಷ್ಯದ ಮಾತು…
ಅಭಿಮಾನಿಗಳ ಅಭಿಮತ.
ಅದು ಒತ್ತಟ್ಟಿಗಿದಲಿ.. ಪ್ರಸಕ್ತ ಖಾದರ್ ಅವರಿಗೆ ಕ್ಯಾಬಿನೆಟ್ ಪದವಿಯ ಉನ್ನತ ಸಚಿವ ಸ್ಥಾನ ನೀಡದೇ, ಸ್ಪೀಕರ್ ಹುದ್ದೆ ನೀಡುವ ಮೂಲಕ ಅವರನ್ನು ಒಂದೆಡೆ ಗೌರವದಲ್ಲಿ ಕೂರಿಸಿದಾಗ.. ಕೈ ತಪ್ಪಿರುವುದು ಕನ್ನಾಡಿನ ಕರಾವಳಿಗೆ ಉನ್ನತ ಸಚಿವ ಸ್ಥಾನ ಮತ್ತು ಸ್ಥಾನೀಯ ಉಸ್ತುವಾರಿ ಸಚಿವತ್ವದ ಪ್ರಾತಿನಿಧ್ಯ!
ಅದಿರಲಿ ಖಾದರ್ ಅವರು -ಸಹೃದಯಿ, ಸರಳ ವ್ಯಕ್ತಿ. ತನಗಿಂಥದೇ ಬೇಕೆಂದು ಪಟ್ಟು ಹಿಡಿಯದವರು. ಪಕ್ಷದ ನಿಷ್ಠಾವಂತ ನಾಯಕ. ಕಾರ್ಯಕರ್ತರ ಆಪ್ತ. ಜನರೆಲ್ಲರ ಒಲುಮೆಯ ಪ್ರೀತಿಪಾತ್ರ. ಈ ಕಾರಣದೀಂದಲೇ ಅವರು ಕರಾವಳಿಯ ಅಳಿಸಲಾಗದ ಖದರುಳ್ಳ ಖಾದರು!

ಇತ್ತೀಚಿನ ವರ್ಷಗಳ ಹಿಂದೊಮ್ಮೆ ಕೋಟೆಕಾರು ಬೀರಿ ಕೊಂಡಾಣದಲ್ಲಿ ಕಟೀಲು ಮೇಳದ ಆಟ. ಅದು ಚುನಾವಣಾ ಸಮಯ. ಆಗವರು ಸಚಿವರಾಗಿದ್ದರು. ನಾನೂ ಅಲ್ಲಿದ್ದೆ. ಪರಿಚಯಿಸಲಿಕ್ಕೋ, ಗುರುತು ಮಾಡಲೋ ಹೋಗಲಿಲ್ಲ. ಏಕೆಂದರೆ ಪತ್ರಕರ್ತ ನಾದವನು ಎಂದಿಗೂ ಕೊನೆಯ ಬೆಂಚಿನ ಪ್ರೇಕ್ಷಕನಾಗಬೇಕೆಂಬ ಜಾಗೃತ ಪ್ರಜ್ಞೆ!!
ಆದರೆ “ಖದರೇ”ನೂ ಇಲ್ಲದೇ ಒಬ್ಬ ಸಾಮಾನ್ಯ ಮನುಷ್ಯನಾಗಿ ಆಟಕ್ಕೆ ಬಂದ ಖಾದರ್ ಅವರು ಸಭೆಯಲ್ಲಿ ಓಡಾಡಲಿಲ್ಲ.ನೆರೆದ ನೂರಾರು ಮಂದಿಗೆ ಕೈ ಬೀಸಲಿಲ್ಲ! ತಾನು ಬಂದಿದ್ದೇನೆಂಬ ರುಜುವಾತಿನ ಮೊಹರು ಒತ್ತಲಿಲ್ಲ!!
ಬದಲಿಗೆ ಏನು ಮಾಡಿದ್ದರೆಂದರೆ….
ಚೌಕಿಗೆ ಬಂದು ಕಲಾವಿದರ ಪೆಟ್ಟಿಗೆಯಲ್ಲಿ ಕುಳಿತರು. ಕಲಾವಿರದರ ಕುರಿತೇ ಕ್ಷೇಮ ವಿಚಾರಿಸಿದರು. ಸಂಘಟಕರ ಜತೆ ಮಾತಾಡಿದರು. ಅಲ್ಲೇ ಸಾರ್ವಜನಿಕರೊಡನೆ ನಿಂತು ಹಾಳೆ ಪ್ಲೇಟಲ್ಲಿ ಇಕ್ಕಿದ್ದನ್ನು ಉಂಡರು!
ಕಲಾವಿದರೊಡನೆ ಮಾತಾಡಿ, ಸ್ವಲ್ಪ ಆಟ ನೋಡಿ ಯುವಕರೊಡನೆ ಬೆರೆತು ಮರಳಿದರು.
“ಆರ್ ಅಂಚನೇ ಮಾರ್ರೇ.. ಊರುಡ್ ಇತ್ತ್ಂಡ ಜವನೆರೊಟ್ಟುಗ್ ಮಸ್ತ್ ಕುಸಾಲ್ ಪಾತೆರ್ವೆರ್. ನೇಮ, ಆಟ ಪನ್ಪಿ ಬೇಧ ಇಜ್ಜಾಂದೆ ಒಟ್ಟು ಸೇರುವೆರ್” ಎಂದರು ಕೆಲವರು..
ಇಂಥ ಖಾದರ್ ಈಗ ಕರ್ನಾಟಕದ ಸ್ಪೀಕರ್.
ಇಷ್ಟಕ್ಕೂ ಅವರು ನಮ್ಮ ಗಡಿನಾಡಿನವರು. ಅವರ ತಂದೆ ಯು. ಟಿ. ಫರೀದ್ ನಮ್ಮ ಉಪ್ಪಳ ಮೂಲದವರು. ಹೀಗಾಗಿ ಕಾಸರಗೋಡಿನ ಗಡಿನಾಡಿಗರಲ್ಲಿ ಮಮತೆ. ಒಟ್ಟಂದದಲ್ಲಿ ಖಾದರ್ ಅವರಪ್ಪ ಫರೀದರ ಫಥ ತುಳಿದ ಮನುಷ್ಯ ಪ್ರೀತಿಯ ರಾಜಕಾರಣಿ. ಕರ್ನಾಟಕದ ಚರಿತ್ರೆಯಲ್ಲೇ ಮುಸಲ್ಮಾನ ನೊಬ್ಬ, ಅದರಲ್ಲೂ ಕರಾವಳಿಯ ಮಂಗಳೂರಿನವರು ರಾಜ್ಯದ “ಸ್ಪೀಕರ್” ಆಗುವುದು ಇದೇ ಮೊದಲು!
ಶಾಸನ ಸಭೆಯ ಸ್ಪೀಕರ್ ಎಂದರೆ ಅದು ಮುಖ್ಯಮಂತ್ರಿಗೂ ಉನ್ನತ ಸ್ಥಾನಮಾನ. ಅದಕ್ಕೆ ಮಂತ್ರಿ ಪದವಿಯಿಲ್ಲ ನಿಜ. ಆದರೆ ಮಂತ್ರಿಗಳೆಲ್ಲರೂ, ಶಾಸಕರೆಲ್ಲರೂ ಅಧ್ಯಕ್ಷರಿಗೆ ನಮಿಸಿ ಮಾತಾಡಬೇಕು. ನಾಳೆ ಮುಖ್ಯಮಂತ್ರಿ ಆಗುವವರಿಗೆ ಇದೇ ದೊಡ್ಡ ಅನುಭವದ ಅಂಗೀಕಾರ……!
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು.ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು).