ನವದೆಹಲಿ: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಸಂಬಂಧ ಕರಡು ಅಧಿಸೂಚನೆಯನ್ನು ಅಮೆರಿಕ ಹೊರಡಿಸಿದೆ. ಡೊನಾಲ್ಡ್ ಟ್ರಂಪ್ ಆಡಳಿತದ ಈ ನಿರ್ಧಾರವು ಭಾರತದ ರಫ್ತುದಾರರ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.
ಕೆಲವೊಂದು ವಿನಾಯಿತಿಗಳನ್ನು ಹೊರತುಪಡಿಸಿದರೆ, ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ
ಭಾರತದ ಸರಕುಗಳ ಮೇಲಿನ ಒಟ್ಟು ಸುಂಕ ಈಗ ಶೇಕಡ 50 ಆಗಿದೆ. ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕವು ಮೊದಲು ಶೇ 25ರಷ್ಟು ಸುಂಕ ವಿಧಿಸಿತ್ತು. ಇದು ಆಗಸ್ಟ್ 7ರಂದು ಜಾರಿಯಾಗಿತ್ತು. ‘ಭಾರತದ ಸರಕುಗಳ ಮೇಲಿನ ಹೊಸ ಸುಂಕ ವ್ಯವಸ್ಥೆ ಆಗಸ್ಟ್ 27ರ ಮಧ್ಯರಾತ್ರಿ 12.01ರ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 9.31) ಬಳಿಕ ಜಾರಿಗೆ ಬರಲಿದೆ’ ಎಂದು ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು (ಕಸ್ಟಮ್ಸ್ ವಿಭಾಗ) ಸೋಮವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
‘ಅಮೆರಿಕಕ್ಕೆ ಕಳುಹಿಸಲಿಕ್ಕಾಗಿ ಆಗಸ್ಟ್ 27ರ ಮಧ್ಯರಾತ್ರಿ 12.01ಕ್ಕೂ ಮೊದಲು ಹಡಗುಗಳಿಗೆ ಲೋಡ್ ಮಾಡಿರುವ ಭಾರತದ ಸರಕುಗಳಿಗೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಲಾಗುವುದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಕಾರಣ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಹೆಚ್ಚುವರಿ ಸುಂಕದ ಹೊರೆ ತಪ್ಪಿಸಲಿಕ್ಕಾಗಿ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ 21 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಯಾವುದೇ ಒಪ್ಪಂದ ಏರ್ಪಡದೇ ಇರುವುದರಿಂದ ಹೆಚ್ಚುವರಿ ಸುಂಕ ಸೇರಿ ಶೇ 50ರಷ್ಟು ಸುಂಕ ಜಾರಿಗೆ ಬಂದಿದೆ. ಅಮೆರಿಕದ ನಿರ್ಧಾರದಿಂದ ತೊಂದರೆಗೆ ಒಳಗಾಗಬಹುದಾದ ಕ್ಷೇತ್ರಗಳಿಗೆ ಬೆಂಬಲವಾಗಿ ನಿಲ್ಲಲು ಕ್ರಮ ಕೈಗೊಳ್ಳಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಸೋಮವಾರ ಹೇಳಿದ್ದರು.
ಟ್ರಂಪ್ ಅವರು ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರ ಘೋಷಿಸಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ‘ಭಾರತವು ತನ್ನ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದಿದ್ದರು.ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಒಟ್ಟು ಸರಕಿನಲ್ಲಿ ಶೇ 55ರಷ್ಟು ಸರಕುಗಳ ಮೇಲೆ ಹೆಚ್ಚುವರಿ ಸುಂಕ ಪರಿಣಾಮ ಬೀರಬಹುದು ಎಂದು ರಫ್ತುದಾರರ ಒಕ್ಕೂಟ ಅಂದಾಜಿಸಿದೆ. ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, 48 ಬಿಲಿಯನ್ ಡಾಲರ್ಗೂ (₹4.20 ಲಕ್ಷ ಕೋಟಿ) ಹೆಚ್ಚಿನ ಮೊತ್ತದ ವ್ಯಾಪಾರದ ಮೇಲೆ ಪರಿಣಾಮ ಆಗಲಿದೆ
ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಜವಳಿ, ಸಿದ್ಧ ಉಡುಪು, ಮುತ್ತು,ಹರಳು, ಆಭರಣಗಳು, ಸೀಗಡಿ, ಚರ್ಮದ ಉತ್ಪನ್ನಗಳು, ಪಾದರಕ್ಷೆ, ಡೇರಿ ಉತ್ಪನ್ನಗಳು, ರಾಸಾಯನಿಕಗಳು ಹಾಗೂ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಯಂತ್ರೋಪಕರಣಗಳ ಮೇಲೆ ಹೆಚ್ಚಿನ ಸುಂಕದ ಹೊರೆ ಬೀಳಲಿದೆ.
ಔಷಧ, ತೈಲ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಹೆಚ್ಚುವರಿ ಸುಂಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.












