ಧರ್ಮಸ್ಥಳ:ದೇಶದ ಗ್ರಾಮೀಣ ಪ್ರದೇಶದ ಶಿಕ್ಷಣ, ಆರೋಗ್ಯ ಸೇವೆಗೆ ಒತ್ತು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗಮನಹರಿಸುವಂತೆ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಕರೆ ನೀಡಿದ್ದಾರೆ. ಅವರು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಮೃತ ವರ್ಷಿಣಿ ಸಭಾಭವನದಲ್ಲಿ ಭಕ್ತರ ಸರತಿ ಸಾಲಿನ ಸುಸಜ್ಜಿತ ವ್ಯವಸ್ಥೆ ಗಳನ್ನೊಳಗೊಂಡ ಸಂಕೀರ್ಣ ಶ್ರೀ ಸಾನ್ನಿಧ್ಯ ಇದರ ಉದ್ಘಾಟನೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ 2024- 25ರ ಜ್ಞಾನದೀಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೇಶದ ಹೃದಯ ಭಾಗದಂತಿರುವ ಹಳ್ಳಿಗಳಿಗೆ ಶಿಕ್ಷಣ ಸೌಲಭ್ಯಗಳನ್ನು ವಿಸ್ತರಿಸುವುದು
ಪುಣ್ಯದ ಕೆಲಸ.ಧಾರ್ಮಿಕ ಕೇಂದ್ರಗಳ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರ ಗಳ ಅಭಿವೃದ್ಧಿಕೊಡುಗೆ ನೀಡುತ್ತಿದೆ ಜೊತೆಗೆ ಧಾರ್ಮಿಕ ಕೇಂದ್ರ ಗಳು ಪ್ರಾಚೀನ ನಮ್ಮ ಪರಂಪರೆಯನ್ನು ಉಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಭಾರತ ಜಗತ್ತಿನ ಆಧ್ಯಾತ್ಮಿಕ ಕೇಂದ್ರ ವಾಗಿದೆ.ಜಗತ್ತನ್ನು ಒಂದು ಕುಟುಂಬವೆಂದು ನೋಡಬೇಕೆನ್ನುವ ಚಿಂತನೆ ಹೊಂದಿರುವ ದೇಶ. ಪ್ರಜಾ ಪ್ರಭುತ್ವದಲ್ಲಿ ಸಮರ್ಪಕವಾದ ಮಾತುಕತೆಯ ಅಗತ್ಯವಿದೆ. ಹಲವು ಸಮಸ್ಯೆಗಳನ್ನು ಅರ್ಥಪೂರ್ಣವಾದ ಮಾತುಕತೆಯ ಮೂಲಕ ಪರಿಹಾರ ಸಾಧ್ಯ.
ಕಾರ್ಪೋರೇಟ್ ಸಂಸ್ಥೆಗಳು ಕೂಡ ತನ್ಮ ಸಿಎಸ್ಆರ್ ನಿಧಿಯಿಂದ ಶಿಕ್ಷಣ, ಆರೋಗ್ಯ , ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚು ಕೊಡುಗೆ ನೀಡುವಂತಾಗಬೇಕು ಎಂದರು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಜನರೊಂದಿಗೆ ಉತ್ತಮ ಮಾತುಕತೆ ನಡೆಸಬೇಕು. ದೇಶದ ವೈವಿಧ್ಯತೆಯ ಸಂಸ್ಕೃತಿಯನ್ನು ಉಳಿಸಿಕೊಂಡು ದೇಶದ ಸೌಹಾರ್ದ ತೆಯನ್ನು ಕಾಪಾಡಿಕೊಂಡು ವಿಶ್ವ ಭ್ರಾತೃತ್ವವನ್ನು ತೋರಿಸಬೇಕಾಗಿದೆ. ದೇಶದ ಪ್ರಜೆಗಳು ತಮ್ಮ ಹಕ್ಕುಗಳ ಜೊತೆ ಸಂವಿಧಾನದ ಮೂಲಕ ತಮಗೆ ನೀಡಿರುವ ಕರ್ತವ್ಯ ವನ್ನು ಮರೆಯಬಾರದು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡುವಂತಾಗಬೇಕು ಎಂದು ಧನ್ಕರ್ ಕರೆ ನೀಡಿದರು.
ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿಯಾದರೆ, ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ. ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯ ಇದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದು ಅವರು ಹೇಳಿದರು.
ನಾವು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು. ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು. 2047ರ ವೇಳೆಗೆ ಪರಿಪೂರ್ಣ ಸಶಕ್ತ ಭಾರತದ ಗುರಿಯನ್ನು ತಲುಪಬೇಕಾಗಿದೆ. ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ. ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ ಎಂದರು. ದೇಶದಲ್ಲಿ ಸಮಗ್ರತೆ, ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ದೇವಾಲಯದ ನಿರ್ವಹಣೆ ಮತ್ತು ಭಕ್ತರ ಆರೈಕೆಗಾಗಿ ಒಂದು ಮಾದರಿ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಸರತಿ ಸಾಲಿನಲ್ಲಿ ಕಾಯುವ ಅವಧಿಯಲ್ಲಿ ಭಕ್ತರಿಗೆ ಇನ್ನೂ ಹೆಚ್ಚಿನ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ,ನೂತನ ಸೌಲಭ್ಯದೊಂದಿಗೆ ಹೊಸ ಸರತಿ ಸಾಲಿನ ಸಂಕೀರ್ಣ ‘ಶ್ರೀ ಸಾನ್ನಿಧ್ಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಡಾ.ಸುದೇಶ್ ಧನಕರ್, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಅಧ್ಯಕ್ಷೆ ಡಾ.ಹೇಮಾವತಿ ಹೆಗ್ಗಡೆ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಡಾ.ಶ್ರೀಧರ ಭಟ್ ನಿರೂಪಿಸಿದರು.