ಬ್ಲೂಮ್ಫಾಂಟೇನ್ (ದಕ್ಷಿಣ ಆಫ್ರಿಕಾ): 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದೆ.ಭಾರತವು ಈ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿದೆ. ಈ ಟೂರ್ನಿಯಲ್ಲಿ ಆಡಿ ಗಮನ ಸೆಳೆದ ಅನೇಕರು ರಾಷ್ಟ್ರೀಯ ತಂಡದಲ್ಲಿ ಮಿಂಚಿ ಖ್ಯಾತನಾಮರಾಗಿದ್ದಾರೆ.ಯುವರಾಜ್ ಸಿಂಗ್ (2000), ರೋಹಿತ್ ಶರ್ಮಾ (2006), ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ (2008), ರಿಷಭ್ ಪಂತ್ ಮತ್ತು ಇಶಾನ್ ಕಿಶನ್ (2016) ಹಾಗೂ ಶುಭಮನ್ ಗಿಲ್ (2018) ಅದರಲ್ಲಿ ಪ್ರಮುಖರು.ಈ ಬಾರಿ ಒಟ್ಟು
16 ತಂಡಗಳು ಕಣದಲ್ಲಿವೆ. ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಈ ಹಂತದಲ್ಲಿ ಎರಡು ವಿಭಾಗಗಳಲ್ಲಿ ತಲಾ ಆರು ತಂಡಗಳು ಆಡಲಿವೆ.
ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಏಕದಿನ ಮಾದರಿ ಈ ಟೂರ್ನಿಯಲ್ಲಿ ತಂಡವನ್ನು ಪಂಜಾಬ್ ರಾಜ್ಯದ ಉದಯ ಸಹರಾನ್ ಮುನ್ನಡೆಸಲಿದ್ದಾರೆ. ಭಾರತ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶನಿವಾರ ಬಾಂಗ್ಲಾದೇಶದ ಎದುರು ಮೊದಲ ಪಂದ್ಯ ಆಡಲಿದೆ.ಈ ಬಾರಿಯ ಐಪಿಎಲ್ಗೆ ಅಯ್ಕೆಯಾಗಿರುವ ಅರಷಿಣ್ ಕುಲಕರ್ಣಿ, ಕೂಚ್ ಬಿಹಾರ್ ಟ್ರೋಫಿಯಲ್ಲಿ ಉತ್ತಮವಾಗಿ ಆಡಿದ್ದ ಮುಷೀರ್ ಖಾನ್, ಅರವೆಳ್ಳಿ ಅವನೀಶ್, ರಾಜ್ ಲಿಂಬಾನಿ ಉಪನಾಯಕ ಸೌಮ್ಯಾ ಪಾಂಡೆ ಅವರು ತಂಡದಲ್ಲಿದ್ದಾರೆ. ಈಚೆಗೆ ನಡೆದಿದ್ದ ಏಷ್ಯಾ ಕಪ್ ಟೂರ್ನಿಯಲ್ಲಿ ಉದಯ್ ಬಳಗವು ಸೆಮಿಫೈನಲ್ ಹಂತದಲ್ಲಿ ಸೋತಿತ್ತು.
ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಭಾರತವು ಜಂಟಿ ಚಾಂಪಿಯನ್ ಆಗಿತ್ತು.
ಇದೇ ಗುಂಪಿನಲ್ಲಿ ಅಮೆರಿಕ ಮತ್ತು ಐರ್ಲೆಂಡ್ ತಂಡಗಳು ಇವೆ. ಭಾರತ ಬಿಟ್ಟರೆ ಆಸ್ಟ್ರೇಲಿಯಾ ಮೂರು ಸಲ ಹಾಗೂ ಪಾಕಿಸ್ತಾನ ಎರಡು ಸಲ ಟ್ರೋಫಿ ಜಯಿಸಿದೆ. ಹೋದ ಸಲ ಬಾಂಗ್ಲಾ ಗೆದ್ದಿತ್ತು.
ದಕ್ಷಿಣ ಆಫ್ರಿಕಾ , ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದು ಬಾರಿ ಜಯಿಸಿವೆ. ಬೆನೊನಿಯಲ್ಲಿ ಫೆಬ್ರುವರಿ 6 ಮತ್ತು 8ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಇಲ್ಲಿಯೇ 11ರಂದು ಬೆನೊನಿಯಲ್ಲಿ ಫೈನಲ್ ಆಯೋಜಿಸಲಾಗಿದೆ.
ಇಂದು ಐರ್ಲೆಂಡ್–ಅಮೆರಿಕ, ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್ ಮಧ್ಯೆ ಪಂದ್ಯಗಳು ನಡೆಯಲಿದೆ.









