ಬೆನೋನಿ: ನಾಯಕ ಉದಯ್ ಸಹಾರನ್ ಮತ್ತು ಸಚಿನ್ ದಾಸ್ ಅವರ ಅಮೋಘ ಆಟದ ನೆರವಿನಿಂದ ಭಾರತ ತಂಡ, ಐಸಿಸಿ 19 ವರ್ಷದೊಳಗಿನ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮಂಗಳವಾರ ಎರಡು ವಿಕೆಟ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.
245 ರನ್ಗಳ ಬೆನ್ನತ್ತಿದ್ದ ಹಾಲಿ ಚಾಂಪಿಯನ್ ಭಾರತ 12 ಓವರ್ಗಳಾಗುವಷ್ಟರಲ್ಲಿ 32 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು
ತೀವ್ರ ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಗೂಡಿದ ಸಹಾರನ್ (81, 124ಎ, 4×6) ಮತ್ತು ದಾಸ್ (96, 95 ಎಸೆತ, 4×11, 6×1) ಐದನೇ ವಿಕೆಟ್ಗೆ 171 ರನ್ ಸೇರಿಸಿ ತಂಡವನ್ನು ವಿಜಯಪಥದಲ್ಲಿ ಮುನ್ನಡೆಸಿದರು. ನಂತರ ಮೂರು ವಿಕೆಟ್ಗಳು ಬಿದ್ದರೂ ಒತ್ತಡವಿರಲಿಲ್ಲ. ಏಳು ಎಸೆತ ಗಳಿರುವಂತೆ ತಂಡ 8 ವಿಕೆಟ್ಗೆ 248 ರನ್ ಗಳಿಸಿ ಜಯಶಾಲಿಯಾಯಿತು.

ನೇಪಾಳ ವಿರುದ್ಧ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲೂ ಇವರಿಬ್ಬರು ಶತಕ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದ್ದರು.ಗುರುವಾರ ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಫೆ.11 ರಂದು ನಿಗದಿಯಾಗಿದೆ. ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು.ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಲುವಾನ್ ಡ್ರಿ ಪ್ರಿಟೋರಿಯಸ್ (76, 102 ಎಸೆತ, 4×6, 6×3) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ರಿಚರ್ಡ್ ಸೆಲೆಟ್ಸ್ವೇನ್ (64, 100ಎ, 4×4, 6×2) ಉತ್ತಮ ಕೊಡುಗೆ ನೀಡಿದರು. ಭಾರತದ ಪರ ವೇಗದ ಬೌಲರ್ ರಾಜ್ ಲಿಂಬಾನಿ ಮೂರು ವಿಕೆಟ್ ಪಡೆದರು.







