
ಸುಳ್ಯ:ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಗ್ರಾಮ, ಸಾಹಿತಿವಾಗಿ, ಸಾಂಸ್ಕೃತಿಕವಾಗಿ ಸಂಪತ್ಭರಿತವಾದ ಸಂಪಾಜೆಯಲ್ಲಿ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.10ರಂದು ನಡೆಯಲಿದೆ. ಸಾಹಿತ್ಯ ಸಮ್ಮೇಳನದ ಸಂಭ್ರಮಕ್ಕೆ ಕಳೆದ ಎರಡು ತಿಂಗಳಿನಿಂದ ಸಂಪಾಜೆ ಗ್ರಾಮ ಅಣಿಯಾಗುತಿದೆ. ಪ್ರಥಮ ಬಾರಿಗೆ ಸಂಪಾಜೆಯಲ್ಲಿ ನಡೆಯುವ ನುಡಿ ಹಬ್ಬಕ್ಕೆ ನಾಡಿಗೇ ನಾಡೇ ಸಿದ್ಧಗೊಳ್ಳುತಿದೆ.ಈ ಬಾರಿಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಮ್ಮೇಳನ ಸಂಘಟಿಸಲು

ನೇತೃತ್ವ ವಹಿಸಿರುವವರು ಕನ್ನಡ ಭಾಷೆಯ ಬೆಳವಣಿಗೆ, ಶೈಕ್ಷಣಿಕ ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆಸುತ್ತಿರುವ ಅಪ್ಪಟ ಕನ್ನಡಾಭಿಮಾನಿ ಡಾ.ಉಮ್ಮರ್ ಬೀಜದಕಟ್ಟೆ. ಗೂನಡ್ಕದ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ.ಉಮ್ಮರ್ ಕಳೆದ ಅನೇಕ ದಿನಗಳಿಂದ ಸುಳ್ಯ ತಾಲೂಕಿನಾದ್ಯಂತ ಓಡಾಟ ನಡೆಸಿ ಸಮ್ಮೇಳನದ ಯಶಸ್ವಿಗೆ ಪ್ರಯತ್ನ ನಡೆಸುತ್ತಿರುವ ಡಾ.ಉಮ್ಮರ್ ಬೀಜದಕಟ್ಟೆ ಸಮ್ಮೇಳನದ ಆಶಯ, ಸಿದ್ಧತೆ, ವೈಶಿಷ್ಟ್ಯತೆಯ ಬಗ್ಗೆ ‘ಸುಳ್ಯ ಮಿರರ್’ ಜೊತೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರಶ್ನೆ:ಗ್ರಾಮೀಣ ಭಾಗದಲ್ಲಿ ನಡೆಯುವ ಈ ಸಾಹಿತ್ಯ ಸಮ್ಮೇಳನದ ಆಶಯ, ಉದ್ದೇಶ ಏನು.?
ಉತ್ತರ:1992ರಿಂದ ಇಲ್ಲಿಯ ತನಕ 25 ಸುಳ್ಯ ತಾಲೂಕು ಸಮ್ಮೇಳನಗಳು ನಡೆದಿದೆ. ಪ್ರಥಮ ಬಾರಿಗೆ ಗ್ರಾಮೀಣ ಭಾಗವಾದ ಸಂಪಾಜೆಯಲ್ಲಿ ನಡೆಯುತಿದೆ.ಗ್ರಾಮೀಣ ಭಾಗದ ಜನರನ್ನು ಭಾಷೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಒಂದಾಗಿಸುವುದು, ಕನ್ನಡದ ಮನಸ್ಸುಗಳನ್ನು ಬೆಸೆಯುವುದು ಸಮ್ಮೇಳನದ ಉದ್ದೇಶ.
ಪ್ರಶ್ನೆ:ಕಳೆದ 25 ಸಾಹಿತ್ಯ ಸಮ್ಮೇಳನಕ್ಕಿಂತ ಈ ಸಮ್ಮೇಳನ ಹೇಗೆ ಭಿನ್ನವಾಗಿರಲಿದೆ..?
ಉತ್ತರ:ಅದ್ದೂರಿ ಆಚರಣೆಗಿಂತ ಅರ್ಥವತ್ತಾದ ಸಮಾರಂಭವಾಗಬೇಕು ಎಂಬುದು ನಮ್ಮ ಆಶಯ. ಸ್ವಯಂ ಸ್ಪೂರ್ತಿಯಿಂದ ಕನ್ನಡದ ಮನಸ್ಸುಗಳು ಒಂದಾಗಬೇಕು ಎಂಬ ಉದ್ದೇಶದಿಂದ ಎಲ್ಲರನ್ನೂ ಒಳಗೊಳ್ಳುವ ಮತ್ತು ಒಂದಾಗಿಸುವ ಪ್ರಯತ್ನ ನಡೆಯುತಿದೆ.ಈ ನುಡಿ ಜಾತ್ರೆಯು ಗ್ರಾಮದ ಹಬ್ಬವಾಗಿ ಮಾರ್ಪಾಡಾಗಲಿದೆ.

ಪ್ರಶ್ನೆ:ಕನ್ನಡ ಭುವನೇಶ್ವರಿಯ ಮೆರವಣಿಗೆಯ ವಿಶೇಷತೆ ಏನು..?
ಉತ್ತರ:ಈ ಬಾರಿಯ ಸಾಹಿತ್ಯ ಸಮ್ಮೇಳನದ ಮೆರವಣಿಗೆ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ.ದೊಡ್ಡಡ್ಕ ಬೈಲೆಯಿಂದ ಸಜ್ಜನ ಸಭಾಭವನದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅದೃಷ್ಠ ಕಾದಿದೆ ಎಂಬುದು ಇನ್ನೊಂದು ವಿಶೇಷ. ಲಕ್ಕಿ ಡ್ರಾ ನಡೆಸಿ ಪ್ರಥಮ ಸ್ಥಾನ ಬಂದವರಿಗೆ ಎರಡು ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಬಹುಮಾನವಾಗಿ ರೇಷ್ಮೆ ಸೀರೆ, ಮೂರನೇ ಬಹುಮಾನವಾಗಿ ಗಡಿಯಾರ ನೀಡಲಾಗುವುದು. ಕೊಂಬು,ಕಹಳೆ, ವಾದ್ಯ ಸಿಂಗಾರಿ, ಮೇಳ, ಚೆಂಡೆ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಲಿದೆ.
ಪ್ರಶ್ನೆ:ವಿಚಾರಗೋಷ್ಠಿಯ ವೈಶಿಷ್ಟ್ಯತೆ ಏನು?
ಉತ್ತರ:ಈ ಬಾರಿ ನಾಡಿನ ಪ್ರಸ್ತುತ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.ಕೃಷಿ, ಪ್ರಾಕೃತಿಕ ವಿಕೋಪದ ಬಗ್ಗೆ ಬೆಳಕು ಚೆಲ್ಲುವ ‘ನಾಡು ನುಡಿ, ವರ್ತಮಾನದ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಪ್ರಮುಖರು ವಿಚಾರ ಮಂಡಿಸಲಿದ್ದಾರೆ.

ಪ್ರಶ್ನೆ:ಸಮ್ಮೇಳನಾಧ್ಯಕ್ಷರ ಕುರಿತು..?
ಉತ್ತರ: ಕೆ.ಆರ್.ಗಂಗಾಧರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಈ ಬಾರಿಯ ಸಮ್ಮೇಳನದ ಬಹುಮುಖ್ಯ ಆಕರ್ಷಣೆ. ಶಿಕ್ಷಕರಾಗಿ, ಸಾಹಿತಿಯಾಗಿ, ಸಂಘಟಕರಾಗಿ ಸ್ಮರಣೀಯ ಸೇವೆ ಮಾಡಿದವರು ಕೆ.ಆರ್.ಗಂಗಾಧರ ಅವರು. ಅನೇಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದ ಆಸಕ್ತಿ ಬೆಳೆಸಿದವರು. ಹಲವಾರು ಮಂದಿ ನಾಯಕರನ್ನು ಬೆಳೆಸಿದವರು. ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ ರಾಷ್ಟ ಪ್ರಶಸ್ತಿ ಪಡೆದು ಜನ ಮಾನಸದಲ್ಲಿ ನೆಲೆಯಾದವರು ನನ್ನ ಗುರುಗಳೂ ಆದ ಕೆಆರ್‌ಜಿ ಅವರು. ಅವರ ಸರ್ವಾಧ್ಯಕ್ಷತೆ ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಲಿದೆ.
ಪ್ರಶ್ನೆ:ಹೊಸ ತಲೆಮಾರನ್ನು ಸಾಹತ್ಯದೆಡೆಗೆ ಆಕರ್ಷಿಸಲು ಏನು ಮಾಡಬಹುದು.?
ಉತ್ತರ:ಯುವ ಜನತೆ ಮತ್ತೆ ಸಾಹಿತ್ಯೆದೆಡೆ ಆಕರ್ಷಿಸುವಂತೆ ಮಾಡಲು ಸಾಹಿತ್ಯ ಸಮ್ಮೇಳನದ ಮೂಲಕ ಪ್ರಯತ್ನ ನಡೆಸಲಾಗುವುದು. ತಾಲೂಕಿನ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಲಾಗುವುದು. ಸಮ್ಮೇಳನ ಕ್ಕೆ, ಸಾಹಿತ್ಯದೆಡೆಗೆ ಯುವ ಜನಾಂಗವನ್ನು ಸೆಳೆಯಲು ವಿಶೇಷ ಪ್ರಯತ್ನ ನಡೆಸಲಾಗುವುದು.
ಪ್ರಶ್ನೆ: ಸಮ್ಮೇಳನದಲ್ಲಿ ಗ್ರಾಮಸ್ಥರ ತೊಡಗಿಸಿಕೊಳ್ಳುವಿಕೆ ಹೇಗಿದೆ.?
ಉತ್ತರ:26ನೇ ಕನ್ನಡ ಸಾಹಿತ್ಯ ಸಮ್ಮೇಳನವು ಗ್ರಾಮದ ಹಬ್ಬವಾಗಲಿದೆ. ಗ್ರಾಮಕ್ಕೆ ಗ್ರಾಮವೇ ಸಿದ್ಧಗೊಳ್ಳುತಿದೆ. ಸ್ವಾಗತ ಸಮಿತಿ, ಉಪ ಸಮಿತಿಗಳ ರಚನೆ ಮಾಡಿ ಸಿದ್ಧತೆ ನಡೆದಿದೆ.ಸಾಹಿತ್ಯ ಸಮ್ಮೇಳನದ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗಿದೆ.

ಪ್ರಶ್ನೆ:ಸಮ್ಮೇಳನದ ಪ್ರಚಾರ ಹೇಗೆ ನಡೆಯುತಿದೆ ?
ಉತ್ತರ:ಸಮ್ಮೇಳನದ ಬಗ್ಗೆ ತಿಂಗಳಿನಿಂದ ವ್ಯಾಪಕ ಪ್ರಚಾರ ನಡೆಸಲಾಗುತಿದೆ. ಸಾಮಾಜಿಕ ಜಾಲ ತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನಡೆಸಲಾಗುತಿದೆ.ತಾಲೂಕಿನ ಪ್ರತಿ ಗ್ರಾಮದಲ್ಲಿ ಸಮ್ಮೇಳನದ ಬಗ್ಗೆ ಪ್ರಚಾರ ನಡೆಸಲಾಗುತಿದೆ. ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಸಾಹಿತ್ಯಾಸಕ್ತರನ್ನು ಸೆಳೆಯಲು ಪ್ರಯತ್ನ ನಡೆಸಲಾಗುವುದು.