ಸುಳ್ಯ:ಉಬರಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಹಾಗೂ ಆ ಬಳಿಕದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭ ಕೆಲವರಿಗಾದ ಅಸಮಾಧಾನ ಹಾಗೂ ಬಣ ರಾಜಕೀಯ ನಡೆದಿದೆ ಎನ್ನಲಾದ ಹಿನ್ನೆಲೆಯಲ್ಲಿ ನಿರ್ದೇಶಕರಿಬ್ಬರು ನೀಡಿದ ರಾಜೀನಾಮೆ ಹಾಗೂ ಆ ಬಳಿಕ ಅವರಿಗೆ ಬೆಂಬಲವಾಗಿ ಕಾರ್ಯಕರ್ತರು ನೀಡಿದ ರಾಜೀನಾಮೆ ಪ್ರಕರಣಗಳನ್ನು ಮಾತುಕತೆಯ ಮೂಲಕ
ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದು ಮಂಡಲ ಬಿಜೆಪಿ ಪ್ರಕಟಣೆ ತಿಳಿಸಿದೆ. ಉಬರಡ್ಕ ಸೊಸೈಟಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭ ಈ ಹಿಂದೆ ಉಪಾಧ್ಯಕ್ಷರಾಗಿದ್ದ ರಾಜೇಶ್ ಭಟ್ ರವರು ಅಧ್ಯಕ್ಷರಾಗಬಹುದೆನ್ನುವ ನಿರೀಕ್ಷೆ ಹಾಗೂ ಅಪೇಕ್ಷೆ ಅನೇಕ ಕಾರ್ಯಕರ್ತರಲ್ಲಿತ್ತು. ಆದರೆ ಹರಿಪ್ರಸಾದ್ ಪಾನತ್ತಿಲರವರ ಹೆಸರು ಅಧ್ಯಕ್ಷತೆಗೆ ಸೂಚಿತವಾಗಲಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಹಾಗೂ ತನ್ನನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಹಿನ್ನೆಲೆಯಲ್ಲಿ ರಾಜೇಶ್ ಭಟ್ ಅವರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.ಕೆಲವು ದಿನಗಳ ಬಳಿಕ ರಾಜೇಶ್ ಭಟ್ ರವರು ಹಾಗೂ ಉಪಾಧ್ಯಕ್ಷತೆಗೆ ಹೆಸರು ಸೂಚಿಸಲ್ಪಟ್ಟು ಚುನಾವಣೆಯಲ್ಲಿ ಸೋತ ಪ್ರಭಾಕರ ಅಮೈ ರವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಈ ಅನಿರೀಕ್ಷಿತ ಬೆಳವಣಿಗೆ ಹಿನ್ನೆಲೆಯಲ್ಲಿ ಸುಮಾರು 40ರಷ್ಟು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿ 10 ದಿನಗಳ ಒಳಗೆ ಉಬರಡ್ಕದಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕು ಎಂದು ಮಂಡಲ ಸಮಿತಿಯನ್ನು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಎರಡು ಹಂತದಲ್ಲಿ ಉಬರಡ್ಕದ ಕಾರ್ಯಕರ್ತರ ಸಭೆ ಸೇರಿಸಿ ಅಹವಾಲುಗಳನ್ನು ಆಲಿಸಿ ಪಾರ್ಟಿ ಕಡೆಯಿಂದ ನಡೆದ ಆಯ್ಕೆ ಪ್ರಕ್ರಿಯೆ ಕುರಿತ ಕಾರ್ಯಕರ್ತರಲ್ಲಿನ ಗೊಂದಲಗಳನ್ನು ನಿವಾರಿಸಲಾಯಿತು. ಪಾರ್ಟಿಯ ಹಿತದೃಷ್ಟಿಯಿಂದ ಎಲ್ಲಾ ಕಾರ್ಯಕರ್ತರು ವೈಯುಕ್ತಿಕ ಭಿನ್ನಾಭಿಪ್ರಾಯ ಗಳನ್ನು ಮರೆತು ಒಂದಾಗಿ ಕೆಲಸ ನಿರ್ವಹಿಸಲು ವಿನಂತಿಸಲಾಯಿತು. ಪಾರ್ಟಿಯ ಹಾಗೂ ಸಹಕಾರಿ ಸಂಘದ ಹಿತದೃಷ್ಟಿಯಿಂದ ರಾಜೀನಾಮೆ ನೀಡಿದ ನಿರ್ದೇಶಕರು ತಮ್ಮ ರಾಜೀನಾಮೆ ಹಿಂತೆಗೆದುಕೊಂಡು ಸಕ್ರಿಯವಾಗಿ ಪಾಲ್ಗೊಳ್ಳಲು ವಿನಂತಿಸಲಾಯಿತು.
ಕಾರ್ಯಕರ್ತರೆಲ್ಲರೂ ಅದಕ್ಕೆ ಸಹಮತವನ್ನು ವ್ಯಕ್ತಪಡಿಸಿದರು. ರಾಜೀನಾಮೆ ನೀಡಿದ ನಿರ್ದೇಶಕರ ಮನೆಯವರನ್ನು ಕೂಡ ಮನವೊಲಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಮುಂದಕ್ಕೆ ಎಲ್ಲಾ ಕಾರ್ಯಕರ್ತರು ಸೇರಿಕೊಂಡು ಪಾರ್ಟಿಯ ಬಲವರ್ಧನೆಗೆ ದುಡಿಯಬೇಕೆಂದು ನಿರ್ಧರಿಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ನಿಕಟಪೂರ್ವ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಉಪಸ್ಥಿತರಿದ್ದರು,ಹರೀಶ ರೈ ಉಬರಡ್ಕ, ಶಕ್ತಿಕೇಂದ್ರ ಪ್ರಮುಖ ಸಂದೀಪ್ ಮದುವೆಗದ್ದೆ, ಸೊಸೈಟಿ ಪೂರ್ವಧ್ಯಕ್ಷ ಯು ಎಸ್ ವೆಂಕಟ್ರಾವ್, ಗೋಪಾಲಕೃಷ್ಣ ಭಟ್, ಸಹಕಾರಿಯ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ಮತ್ತು ಎಲ್ಲಾ ನಿರ್ದೇಶಕರು, ಯು ಭಾಸ್ಕರ ರಾವ್, ರಾಜೇಶ್ ರೈ, ಸಂದೀಪ್ ರೈ, ಕುಮಾರ ಭಟ್, ಅನಿಲ್ ಪಾನತ್ತಿಲ, ವಿನಯ ಯಾವಟೆ, ಮನಮೋಹನ ಬಳ್ಳಡ್ಕ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಉಬರಡ್ಕ 75ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದರು.
ಉಬರಡ್ಕದಲ್ಲಿ ಕಳೆದ ಕೆಲವು ದಿನಗಳಿಂದ ನಡೆದ ಬೆಳವಣಿಗೆ ಆಂತರಿಕ ಸಮಸ್ಯೆಯಾಗಿದ್ದು, ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.















