ಮಂಗಳೂರು: ಕೆಂಪುಕಲ್ಲು ವಿಷಯದಲ್ಲಿ ಎದುರಾದ ಕಾನೂನಾತ್ಮಕ ತೊಡಕನ್ನು ಈಗಾಗಲೇ ಸರಿಪಡಿಸಿ ಸರಳೀಕರಣ ಮಾಡಿ ಸಚಿವ ಸಂಪುಟ ಹಾಗೂ ಮುಖ್ಯಮಂತ್ರಿಯವರ ಅನುಮತಿ ಪಡೆಯಲಾಗಿದೆ. ಸರಳೀಕರಣ ಮಾಡಿರುವ ಹೊಸ ನೀತಿ ಜಿಲ್ಲಾಡಳಿತದ ಮೂಲಕ ಅನುಷ್ಟಾನಗೊಳ್ಳಲಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆಂಪುಕಲ್ಲು ತೆಗೆಯಲು
ಅನುಮತಿ ಕೋರಿ ದ.ಕ. ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 53 ಅರ್ಜಿಗಳಲ್ಲಿ 25 ಅರ್ಜಿಗಳಿಗೆ ಅನುಮತಿಯನ್ನೂ ಸಂಬಂಧಪಟ್ಟ ಇಲಾಖೆಯಿಂದ ನೀಡಲಾಗಿದೆ ಎಂದರು.
ಕೆಂಪುಕಲ್ಲು ವಿಚಾರದಲ್ಲಿ ಹಲವು ಕಾಲದಿಂದ ಕಾನೂನಾತ್ಮಕ ತೊಡಕು ಇತ್ತು. ಇದರಿಂದಾಗಿ ಪರವಾನಿಗೆ ಪಡೆಯದೆ ಅಕ್ರಮವಾಗಿ ವ್ಯವಹಾರ ನಡೆಯುತ್ತಿತ್ತು. ಇದನ್ನು ಕಾನೂನು ಬದ್ದಗೊಳಿಸುವ ಉದ್ದೇಶದಿಂದ ಹಲವು ಸುತ್ತಿನ ಸಭೆ, ಸಮಾಲೋಚನೆ ನಡೆಸಿದ ಬಳಿಕ ಈಗ ಸರಕಾರದ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನು ಸರಳೀಕರಣಗೊಳಿಸಿ ಕರಾವಳಿ ಜನರಿಗೆ ಗೃಹ ನಿರ್ಮಾಣಕ್ಕೆ ಅನುಕೂಲವಾಗುವ ಕೆಂಪುಕಲ್ಲು ಸಮರ್ಪಕವಾಗಿ ನೀಡುವಂತೆ ಮಾಡಲು ಹೊಸ ನೀತಿಯಲ್ಲಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಜನಸಾಮಾನ್ಯರಿಗೆ ಬೇಕಾಗುವ ಕೆಂಪುಕಲ್ಲು ವಿಚಾರದಲ್ಲಿ ಎದುರಾಗಿರುವ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಆಗಿದೆ ಎಂದರು.
ಕೆಂಪುಕಲ್ಲಿಗೆ ಇತ್ತೀಚೆಗೆ ಏರಿಕೆ ಮಾಡಲಾದ ರಾಜಧನವನ್ನು ಇಳಿಕೆ ಮಾಡಲಾಗಿದೆ. ನಿಖರ ರಾಯಲ್ಟಿ ದರ ವಾರದೊಳಗೆ ತಿಳಿಯಲಿದೆ. ಟನ್ಗೆ 280 ರೂ.ಗಳಿದ್ದ ರಾಜಧನವನ್ನು ಅಂದಾಜು 90 ರೂ.ಗಳಿಗೆ ಇಳಿಕೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಜನಸಾಮಾನ್ಯರಿಗೆ ಕೆಂಪುಕಲ್ಲು ನಿಯಮಿತವಾಗಿ ನೀಡಲು ಸಾಧ್ಯವಾಗಲಿದೆ. ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಕೆಂಪು ಕಲ್ಲು ದರ ಹಿಂದಿಗಿಂತ ಏರಿಕೆ ಮಾಡಬಾರದು. ಒಂದು ವೇಳೆ ಕೆಂಪುಕಲ್ಲು ದರ ಏರಿಕೆ ಆದ ಬಗ್ಗೆ ಮಾಹಿತಿ ಬಂದರೆ ಸರಕಾರವೇ ಕೆಂಪುಕಲ್ಲು ದರ ನಿಗದಿ ಮಾಡಿ ಸ್ಯಾಂಡ್ ಬಜಾರ್ ಆ್ಯಪ್ ಮಾದರಿಯಲ್ಲಿಯೇ ಹೊಸ ಆ್ಯಪ್ ತಂದು ಜನಸಾಮಾನ್ಯರಿಗೆ ಕೆಂಪು ಕಲ್ಲು ನೀಡುವ ಬಗ್ಗೆ ಮುಂಬರುವ ದಿನಗಳಲ್ಲಿ ಯೋಚನೆ ಮಾಡಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.





