ಸುಳ್ಯ: ಸುಳ್ಯ ನಗರದಲ್ಲಿ ಇನ್ನು ಟ್ರಾಫಿಕ್ ರೂಲ್ಸ್ ಸ್ಟ್ರಿಕ್ಟ್ ಆಗಲಿದೆ. ಅನಧಿಕೃತ ಪಾರ್ಕಿಂಗ್, ಟ್ರಾಫಿಕ್ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ದಂಡ ವಿಧಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ಎಸ್ಐ ಈರಯ್ಯ ದೂಂತೂರು ಹೇಳಿದ್ದಾರೆ. ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾದ ಬಳಿಕ ವರ್ತಕರ ಸಂಘ, ರಿಕ್ಷಾ ಚಾಲಕರ ಸಂಘ ಇತರ ವಾಹನ ಚಾಲಕರ ಹಾಗೂ ಮಾಲಕರ ಸಂಘದ ಪದಾಧಿಕಾರಿಗಳ ಜೊತೆ ಸುಳ್ಯ ನಗರದ ಟ್ರಾಫಿಕ್ ನಿಯಂತ್ರಣ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸುಳ್ಯ ನಗರದಲ್ಲಿ ಅನುಷ್ಠಾನದಲ್ಲಿರುವಂತೆ ರಸ್ತೆ ಬದಿಯ ಪಾರ್ಕಿಂಗ್ ಸಮರ್ಪಕವಾಗಿ
ಅನುಷ್ಠಾನ ಮಾಡಲಾಗುವುದು.ಒಂದು ದಿನ ರಸ್ತೆಯ ಬಲ ಬದಿ ಮರು ದಿನ ರಸ್ತೆಯ ಎಡ ಬದಿ ಎಂಬ ನೆಲೆಯಲ್ಲಿ ಲಘು ವಾಹನಗಳನ್ನು ಪಾರ್ಕ್ ಮಾಡಬೇಕು. ಇದನ್ನು ಖಡ್ಡಾಯವಾಗಿ ಪಾಲನೆ ಮಾಡಬೇಕು.
ಪಾರ್ಕಿಂಗ್ ಇಲ್ಲದ ಬದಿಯ ವರ್ತಕರು ತಮ್ಮ ಅಂಗಡಿ ಮುಂಭಾಗದಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಬೇಕು. ಅಂಗಡಿ ಮುಂಭಾಗದಲ್ಲಿ ಘನ ವಾಹನ ನಿಲ್ಲಿಸಿ ಅನ್ ಲೋಡ್ ಮಾಡಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಸುಳ್ಯ ನಗರದ ಟ್ರಾಫಿಕ್ ಸಮಸ್ಯೆ ಬಗ್ಗಗೆ ಸುಳ್ಯ ಮಿರರ್ ಪ್ರಕಟಿಸಿದ್ದ ವರದಿಗಳಲ್ಲೊಂದು
ರಿಕ್ಷಾ ಚಾಲಕರು ಹಾಗೂ ಇತರ ವಾಹನ ಮಾಲಕ, ಚಾಲಕ ಸಂಘದವರು ಆಯಾ ದಿನಗಳಲ್ಲಿ ಅದೇ ಬದಿಯಲ್ಲಿ ಪಾರ್ಕಿಂಗ್ ಮಾಡಿ ಸಹಕಾರ ನೀಡಬೇಕು. ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು, ನಗರದ ಎಲ್ಲೆಡೆ ಸ್ಥಾಪಿಸಿರುವ ಸಿಸಿ ಕ್ಯಾಮರಾ ಮೂಲಕ ಠಾಣೆಯಿಂದ ನಿರಂತರ ಟ್ರಾಫಿಕ್ ವ್ಯವಸ್ಥೆ ವೀಕ್ಷಿಸಲಾಗುವುದು. ಟ್ರಾಫಿಕ್ ಕಾನೂನು ಉಲ್ಲಂಘನೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈರಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನಗಳಲ್ಲಿ ಓಡಾಡುವುದು, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು, ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾವಣೆ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಐ ಅವರು ಎಚ್ಚರಿಕೆ ನೀಡಿದ್ದಾರೆ.
ವರ್ತಕರ ಸಂಘ, ವಾಹನ ಚಾಲಕ ಮಾಲಕರ ಸಂಘ, ರಿಕ್ಷಾ ಚಾಲಕ ಮಾಲಕರ ಸಂಘ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.









