ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಆಡಳಿತಾಧಿಕಾರಿ ಆಬಿದ್ ಗದ್ಯಾಲ್ ಅಧ್ಯಕ್ಷತೆಯಲ್ಲಿ ಜೂ.22 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್, ತಹಶೀಲ್ದಾರ್ ಜಿ. ಮಂಜುನಾಥ್ ಹಾಗೂ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.
ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು
ಮಾಡಬೇಕು ಎಂದು ಆಡಳಿತಾಧಿಕಾರಿ ಸೂಚಿಸಿದರು. ಮಾನವ ಅಥವಾ ಜಾನುವಾರು ಸೇರಿ ಯಾವುದಾದರೂ
ಜೀವಹಾನಿ ಸಂಭವಿಸಬಾರದುಎಲ್ಲ ಅಧಿಕಾರಿಗಳೂ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು.ಈ ಹಿಂದೆ ಪ್ರಾಕೃತಿಕ ವಿಕೋಪ ಉಂಟಾದ ಪಂಚಾಯತ್ಗಳಲ್ಲಿ ವಿಶೇಷ ಗಮನ ನೀಡಲಾಗಿದೆ. ನೋಡೆಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಸಭೆ ಮಾಡಲಾಗಿದೆ ಎಂದು ಕೈಗೊಂಡ ಮುಂಜಾಗೃತಾ ಕ್ರಮಗಳ ಕುರಿತು ಇ.ಒ. ಹಾಗೂ ತಹಶೀಲ್ದಾರ್ ಮಾಹಿತಿ ನೀಡಿದರು.
ಕಳೆದ ಬಾರಿ ಪ್ರಾಕೃತಿಕ ವಿಕೋಪ ಆದ ಕಡೆಗಳಲ್ಲಿ ಮಂಜೂರಾದ ಸೇತುವೆ ಕಾಮಗಾರಿಗಳನ್ನು ಕೂಡಲೇ ಮುಗಿಸಬೇಕು ಎಂದು ಅಧಕಾರಿಗಳಿಗೆ ಸೂಚನೆ ನೀಡಲಾಯಿತು. ಕಳೆದ ಬಾರಿ ಪ್ರಾಕೃತಿಕ ವಿಕೋಪ ಉಂಟಾದ ಕಡೆಗಳಲ್ಲಿ ಹಲವು ಕಡೆ ತಾತ್ಕಾಲಿಕ ಕಾಮಗಾರಿ ಮಾತ್ರ ಮಾಡಲಾಗಿದೆ. ಅಲ್ಲಿ ಈ ಬಾರಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅಲ್ಲಿ ಮುಂಜಾಗ್ರತಾ ಕ್ರಮಕ್ಕೆ ಹೆಚ್ಚು ಅನುದಾನ ಅಗತ್ಯ ಇದೆ ಎಂದು ಜಿ.ಪಂ.ಇಂಜಿನಿಯರ್ಗಳು ಸಭೆಗೆ ತಿಳಿಸಿದರು. ಹೆಚ್ಚಿನ ಅನುದಾನ ಕೋರಲು ನಿರ್ಧರಿಸಲಾಯಿತು. ಪ್ರಾಕೃತಿಕ ವಿಕೋಪ ಅಪಾಯಕಾರಿ ಮರಗಳ ತೆರವು ಮತ್ತಿತರ ಸಂದರ್ಭದಲ್ಲಿ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿ ಎಂದು ಆಡಳಿತಾಧಿಕಾರಿ ಹೇಳಿದರು. ತಾಲೂಕಿನ ಶಾಲೆಗಳಲ್ಲಿ 29 ವಿವೇಕ ಕೊಠಡಿ ಮಂಜೂರುಗೊಂಡಿದೆ. ಇದರಲ್ಲಿ 28 ಪ್ರಗತಿಯಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾಹಿತಿ ನೀಡಿದರು. ‘ಮುಂದೆ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆ ಬರಲಿದ್ದು, ಬೂತ್ಗಳನ್ನು ಮಾಡುವಾಗ ಹೊಸ ಕೊಠಡಿಗಳನ್ನೇ ಬಳಸಿ ಕೊಳ್ಳಬೇಕು. ಅಲ್ಲದೆ ಇತರ ಮತಗಟ್ಟೆಗಳಾದ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಆಡಳಿತಾಧಿಕಾರಿ ಸೂಚಿಸಿದರು. ಅಗ್ನಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಅಗ್ನಿಶಾಮಕ ಉಪಕರಣಗಳು ಕಡ್ಡಾಯವಾಗಿದ್ದು ತಾಲೂಕಿನ ಪ್ರತೀ ಅಂಗನವಾಡಿಗಳಿಗೂ ಅಳವಡಿಸಿ ಎಂದು ಸೂಚಿಸಿದರು. ತಾಲೂಕಿನ ಸರಕಾರಿ ಕಚೇರಿಗಳ ಸಿಬ್ಬಂದಿಗಳ ವಿವರ ಪಡೆದ ಆಡಳಿತಾಧಿಕಾರಿಗಳು ಹೊರ ಗುತ್ತಿಗೆ ನೌಕರರ ಸಂಬಳ ಆಗುವಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಹಳೆಯ ಸರಕಾರಿ ಕಟ್ಟಡಗಳನ್ನು ಕೆಡವಲು ಮೊದಲು ತಾಂತ್ರಿಕ ಅನುಮತಿ ಪಡೆದ ಬಳಿಕ ಆಡಳಿತಾತ್ಮಕ ಅನುಮತಿ ಪಡೆಯಬೇಕು ಎಂದು ಸೂಚಿಸಿದರು. ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳ ಗುರುತಿಸಲು ಅಬಿದ್ ಗದ್ಯಾಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.