ಸುಳ್ಯ:ನಗರದಲ್ಲಿ ನೀರಿನ ಮಿತ ಬಳಕೆ ಅತೀ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲಾ ವಾರ್ಡ್ಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ.ಮುಂದಿನ ಕೆಲ ದಿನದಲ್ಲಿ ಮಳೆಯಾಗದೇ ಇದ್ದಲ್ಲಿ ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ.
ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರಿನ ಕುರಿತಂತೆ ನಡೆದ
ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದಿನ 10 ದಿನದಲ್ಲಿ ಮಳೆ ಬಾರದೇ ಇದ್ದಲ್ಲಿ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದಿತು. ಈ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ನೀರನ್ನು ಜಾಗರೂಕತೆಯಿಂದ ಮಿತವಾಗಿ ಬಳಸಬೇಕು. ಈ ಕುರಿತು ವಾರ್ಡ್ ವ್ಯಾಪ್ತಿಯಲ್ಲಿ ನಾಗರಿಕರಿಗೆ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಸಲಹೆ ನೀಡಿದರು.
ನಗರದಲ್ಲಿ ಕಾರ್ಯಾಚರಿಸುವ ಇಂದಿರಾ ಕ್ಯಾಂಟಿನ್ ಬಗ್ಗೆ ಮಾಹಿತಿ ನೋಡಿಕೊಳ್ಳುವವರು ಯಾರು, ಅಲ್ಲಿ ಎಷ್ಟು ಊಟ, ತಿಂಡಿ ಹೋಗುತ್ತದೆ ಎಂದು ಮಾಹಿತಿ ನೀಡಬೇಕು ಈ ಬಗ್ಗೆ ನ.ಪಂ. ಗಮನ ಹರಿಸಬೇಕು ಎಂದು ಸದಸ್ಯ ರಾಧಾಕೃಷ್ಣ ಬೂಡು ಹೇಳಿದರು. ನಗರ ಪಂಚಾಯತ್ ವ್ಯಾಪ್ತಿಯ ಕಸ ವಿಲೇವಾರಿ ಹಾಗೂ ಕಿಂಡಿ ಅಣೆಕಟ್ಟು ಕಾಮಗಾರಿ ಬಗ್ಗೆ ನಾನು ನಗರ ಪಂಚಾಯತ್ ಅಧ್ಯಕ್ಷರನ್ನು ಅಭಿನಂದಿಸುತ್ತೇನೆ. ಆದರೆ ಉಳಿದಂತೆ ಇತರೆ ವಿಚಾರದಲ್ಲಿ ನಿರೀಕ್ಷಿತ ಕೆಲಸ ನಡೆದಿಲ್ಲ ಎಂದು ಸದಸ್ಯ ಶರೀಫ್ ಕಂಠಿ ತಿಳಿಸಿದರು. ನ.ಪಂ. ವ್ಯಾಪ್ತಿಯ 12ನೇ ವಾರ್ಡಿನ ಕೆರೆಮೂಲೆ ಭಾಗದಲ್ಲಿ ಚರಂಡಿಗೆ ಆರ್ಸಿಸಿ ಪೈಪ್ ಅಳವಡಿಸುವ ಬಗ್ಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.‘ಬಹುಮಹಡಿ ಕಟ್ಟಡ ನಿರ್ಮಿಸಿ ಬಾಡಿಗೆ ನೀಡುತ್ತಿರುವವರು ತಾವೇ ಇಂಗುಗುಂಡಿ ನಿರ್ಮಿಸಿ ಅದಕ್ಕೆ ಕೊಳಚೆ ನೀರನ್ನು ಬಿಡಬೇಕು. ಅದು ನ.ಪಂ. ಜವಬ್ದಾರಿಯಲ್ಲ. ಇಂದು ಬಡವರೂ ಕೂಡ ಇಂಗುಗುಂಡಿ ನಿರ್ಮಿಸುತ್ತಾರೆ. ಶೌಚಾಲಯದ ನೀರನ್ನು ಹೊರಗೆ ಬಿಡುವುದು ಸರಿಯಲ್ಲ’ ಎಂದು ಸದಸ್ಯರು ಪ್ರಸ್ತಾಪಿಸಿದರು.
ಶಾಸಕರು ಸಭೆಗೆ ಬಾರದಿರುವುದಕ್ಕೆ ಪ್ರತಿಭಟನಾ ಸೂಚಕವಾಗಿ ಸದಸ್ಯ ಕೆ.ಎಸ್.ಉಮ್ಮರ್ ಕಪ್ಪು ಪಟ್ಟಿ ಧರಿಸಿ ಸಭೆಯಲ್ಲಿ ಭಾಗವಹಿಸಿದರು. ಶಾಸಕರು ಸಭೆಗೆ ಬರಬೇಕೆಂದು ನಾವು 7-8ತಿಂಗಳಿಂದ ಬೇಡಿಕೆ ಇಡುತ್ತಿದ್ದೇವೆ. ಆದರೆ ಅವರು ಬಂದಿಲ್ಲ. ಆಡಳಿತದವರು ಕರೆಸಲೂ ಇಲ್ಲ. ಆದ್ದರಿಂದ ಈ ಬಾರಿಯೂ ನಾನು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತೇನೆ ಎಂದರು. ಬಜೆಟ್ ಮೀಟಿಂಗ್ನಲ್ಲಿ ಒಂದು ವಾರ್ಡ್ಗೆ ರೂ.10 ಲಕ್ಷ ಅಭಿವೃದ್ಧಿ ಅನುದಾನ ಕೊಡಬೇಕೆಂದು ಕೇಳಿದ್ದೇವು. ಆದರೆ ಅದು ಆಗಿಲ್ಲ.ಆದ್ದರಿಂದ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ತಿಳಿಸಿದ ಉಮ್ಮರ್ ಅವರು ಕಪ್ಪುಪಟ್ಟಿ ಧರಿಸಿ ಸಭೆಯಲ್ಲಿ ಭಾಗವಹಿಸಿದರು.
ಬೇಡಿಕೆ ಇರುವಲ್ಲಿ ಬೋರ್ವೆಲ್ ಕೊರೆಸುವ ಬಗ್ಗೆ, ವಸತಿ ಯೋಜನೆಯ ಹಣ ಪಾವತಿ ಆಗದೇ ಇರುವ ಬಗ್ಗೆ, ರಸ್ತೆ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.