ಸುಳ್ಯ:ಬೋರ್ವೆಲ್ ಕೊರೆಯುವ ವಿಚಾರದಲ್ಲಿ ಬಿರುಸಿನ ಚರ್ಚೆಗೆ ಮಂಗಳವಾರ ನಡೆದ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ವೇದಿಕೆಯಾಯಿತು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಯನಗರ ವಾರ್ಡ್ನಲ್ಲಿ ಬೋರ್ವೆಲ್ ಕೊರೆಯುವ ವಿಚಾರ ಬಿರುಸಿನ ಚರ್ಚೆ ಹಾಗು ಕಾವೇರಿದ ವಾಗ್ವಾದಕ್ಕೆ ಕಾರಣವಾಯಿತು. ಜಯನಗರ ವಾರ್ಡ್ನ ಕುದ್ಪಾಜೆಯಲ್ಲಿ
ಬೋರ್ವೆಲ್ ಕೊರೆಯಬೇಕು ಎಂದು ಚುನಾವಣೆ ಮುಗಿದ ಕೂಡಲೇ ಮನವಿ ನೀಡಿದ್ದೆ. ಆದರೆ ಬೋರ್ವೆಲ್ ಮಾಡಿಲ್ಲಾ, ಆದರೆ ನಾಮನಿರ್ದೇಶಿತ ಸದಸ್ಯರಾದ ರೋಹಿತ್ ಕೊಯಿಂಗೋಡಿ ಕೇವಲ ಎರಡು ವಾರಗಳ ಹಿಂದೆ ಮನವಿ ನೀಡಿ ಅಲ್ಲಿ ನೀರಿನ ಪಾಯಿಂಟ್ ಗುರುತಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಬಾಲಕೃಷ್ಣ ಭಟ್ ಹೇಳಿದರು.ನಗರ ಪಂಚಾಯತ್ ಆಡಳಿತ ಈ ವಿಚಾರದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಬಾಲಕೃಷ್ಣ ಭಟ್ ಆರೋಪಿಸಿದರು.ಈ ಸಂದರ್ಭದಲ್ಲಿ ಬಾಲಕೃಷ್ಣ ಭಟ್ ಮತ್ತು ರೋಹಿತ್ ಕೊಯಿಂಗೋಡಿ ಮಧ್ಯೆ ಬಿರುಸಿನ ಚರ್ಚೆ ಹಾಗು ಆರೋಪ, ಪ್ರತ್ಯಾರೋಪ ಹಾಗು ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಕುದ್ಪಾಜೆಯಲ್ಲಿ ಬೋರ್ವೆಲ್ ತೆರೆಯಲು ಈ ಹಿಂದೆಯೇ ನಿರ್ಧರಿಸಲಾಗಿದ್ದರೂ ಅಲ್ಲಿ ಆಕ್ಷೇಪಣೆ ಬಂದ ಕಾರಣ ಮಾಡಿಲ್ಲ.ಇದೀಗ ಅಲ್ಲಿ ಬೋರ್ವೆಲ್ ತೆಗೆಸಿ ನೀರು ಸರಬರಾಜು ವ್ಯವಸ್ಥೆ ಮಾಡಲು ನ.ಪಂ.ಸಿದ್ಧವಿದೆ. ಒಳ್ಳೆಯ ನೀರು ದೊರೆಯುವ ಪಾಯಿಂಟ್ ಹುಡುಕಿ ಕೊಳವೆ ಬಾವಿ ಕೊರೆಯಲಾಗುವುದು ಎಂದು ಹೇಳಿದರು.
ಕಸದ ವಿದ್ಯುತ್ ಬೀದಿ ದೀಪಕ್ಕೆ ಅಳವಡಿಸುವ ಸಚಿವರ ಸೂಚನೆ ಏನಾಯಿತು-ಎಂ.ವಿ.ಜಿ. ಪ್ರಶ್ನೆ:
ಕಲ್ಚರ್ಪೆಯಲ್ಲಿ ಕಸದಿಂದ ಉತ್ಪಾದನೆ ಮಾಡಿದ ವಿದ್ಯುತ್ತನ್ನು ಬೀದಿ ದೀಪಕ್ಕೆ ಸರಬರಾಜು ಮಾಡಬೇಕು ಎಂದು ಇಂಧನ ಸಚಿವರಾದ ಸುನಿಲ್ಕುಮಾರ್ ಅವರು ನೀಡಿದ ಸಲಹೆ ಏನಾಯಿತು ಎಂದು ಸದಸ್ಯರಾದ ಎಂ.ವೆಂಕಪ್ಪ ಗೌಡ ಪ್ರಶ್ನಿಸಿದರು. ಯೋಜನೆ ಅನುಷ್ಠಾನ ಮಾಡಿದವವರ ಜೊತೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿನಯಕುಮಾರ್ ಕಂದಡ್ಕ ಹೇಳಿದರು.
ಕೊಡಿಯಾಲಬೈಲು ರಸ್ತೆ ಅಭಿವೃದ್ಧಿ ಪೂರ್ತಿಯಾಗದ ಬಗ್ಗೆ ವೆಂಕಪ್ಪ ಗೌಡ ಆಕ್ಷೇಪ ವ್ಯಕ್ತಪಡಿಸಿದರು.ಕುಡಿಯುವ ನೀರಿನ ಸಮಸ್ಯೆ,ಒಳಚರಂಡಿ ವಿಚಾರ,ನಗರ ರಸ್ತೆಗಳ ಬದಿಯ ಚರಂಡಿ, ಅಪಾಯಕಾರಿ ಮರಗಳ ತೆರವು, ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು, ಪುರಭವನ ದುರಸ್ತಿ, ಗುರುಭವನದ ಸ್ಚಚ್ಛತೆ ಕಾಪಾಡುವ ಮತ್ತು ನಿರ್ವಹಣೆ ಬಗ್ಗೆ ಚರ್ಚೆ ನಡೆಯಿತು. ನಗರ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸದಸ್ಯರು, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಚರ್ಚೆಯಲ್ಲಿ ಭಾಗವಹಿಸಿದ್ದರು.