ಸುಳ್ಯ:ಸುಳ್ಯ ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಮೃತ್ 2 ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಅಳವಡಿಕೆಗೆ ರಸ್ತೆ ಮಧ್ಯೆ ಕಡಿದು ಹಾಕಿ ಮುಚ್ಚದೇ ಬಿಟ್ಟ ಹೊಂಡಗಳನ್ನು ಮುಚ್ಚಿ ದುರಸ್ತಿ ಪಡಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯ ಇಂಜಿನಿಯರ್ಗಳು ತಿಳಿಸಿದ್ದಾರೆ. ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಒಳಚರಂಡಿ ಮಂಡಳಿಯ
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಜಯ್ ಆರ್.ಬಿ ಮಾಹಿತಿ 2025 ಜುಲೈ ತಿಂಗಳಿಗೆ ಕಾಮಗಾರಿ ಮುಗಿಸಬೇಕು ಎಂದು ಸೂಚನೆಯಿದೆ. ಮಳೆಗಾಲ ಇರುವ ಕಾರಣ ಕೆಲ ತಿಂಗಳು ತಡವಾಗಲಿದ್ದು ಮುಂದಿನ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಸುಳ್ಯ ನಗರದಲ್ಲಿ ವಲಯ ಒಂದರಲ್ಲಿ ವಾರ್ಡ್ ಸಂಖ್ಯೆ ಒಂದು ಮತ್ತು ಎರಡು ಹೊರತು ಪಡಿಸಿ ಎಲ್ಲಾ ವಾರ್ಡ್ಗಳಲ್ಲಿ ಯೋಜನೆ ಅನುಷ್ಠಾನ ಆಗಲಿದೆ.
ವಲಯ ಒಂದರಲ್ಲಿ ಮುಂದಿನ ಹಂತದಲ್ಲಿ ಕಾಮಗಾರಿ ನಡೆಸಲಾಗುವುದು. ಇದೀಗ ನಗರದಲ್ಲಿ 40 ಕಿ.ಮಿ.ಪೈಪ್ ಲೈನ್ ಅಳವಡಿಕೆಗೆ ಬಾಕಿ ಇದೆ, ಮೇ ಎರಡನೇ ವಾರಕ್ಕೆ ಪೈಪ್ ಲೈನ್ ಅಳವಡಿಕೆ ಪೂರ್ತಿಯಾಗಲಿದೆ.ಎಕ್ಸ್ಪ್ರೆಸ್ ಪೈಪ್ ಲೈನ್, ಶುದ್ದೀಕರಣ ಘಟಕ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಪೈಪ್ ಅಳವಡಿಕೆಗೆ ರಸ್ತೆಗಳನ್ನು ಕಡಿದು ಹಾಕಿ ಸಮರ್ಪಕವಾಗಿ ಮುಚ್ಚದಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕಡಿದು ಹಾಕಿದ ರಸ್ತೆಗಳನ್ಬು ಮುಚ್ಚಿ ದುರಸ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಮುಚ್ಚಿ ಶಾಂತಿನಗರ ರಸ್ತೆಯಲ್ಲಿ ಹಂಪ್ಸ್ ನಿರ್ಮಾಣ ಆಗಿರುವುದು ಗಮನಕ್ಕೆ ಬಂದಿದೆ ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ. ಪೈಪ್ ಲೈನ್ ಅಳವಡಿಕೆಗೆ ಮಾಡಿದ ಹೊಂಡಗಳನ್ನು, ಹಾಗೂ ರಸ್ತೆ ಕಡಿತವನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇದನ್ನು ನೋಡಿಕೊಳ್ಳಲು ಒಳಚರಂಡಿ ಮಂಡಳಿಯ ಇಂಜಿನಿಯರನ್ನು ನೇಮಕ ಮಾಡಲಾಗಿದೆ ಎಂದರು.

ಕುರುಂಜಿಭಾಗ್ನ ಕ್ಯಾಂಪಸ್ ಬಳಿ ಪೈಪ್ ಲೈನ್ ಹೊಂಡದ ಆವಾಂತರ ಮತ್ತು ಒಳಚರಂಡಿಗೆ ಹಾನಿ ಆಗಿರುವುದನ್ನು ಪರಿಶೀಲನೆ ನಡೆಸಲಾಗಿದೆ. ಇದನ್ನು ಕೂಡಲೇ ಸರಿಪಡಿಸಲಾಗುವುದು ಎಂದರು. ಒಂದೊಂದೇ ಭಾಗದಲ್ಲಿ ಕಾಮಗಾರಿ ಪೂರ್ತಿ ಮಾಡಿ ಕಡಿದ ರಸ್ತೆಯನ್ನು ಅದನ್ನು ದುರಸ್ತಿ ಮಾಡಿ, ಜನರಿಗೆ ಸಮಸ್ಯೆ ಆಗುವುದನ್ನು ತಪ್ಪಿಸಿ ಎಂದು ಸದಸ್ಯರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಶರೀಫ್ ಕಂಠಿ ಮತ್ತಿತರರು ಸಲಹೆ ನೀಡಿದರು.ಕೇಂದ್ರ, ರಾಜ್ಯ ಸರಕಾರ ಹಾಗೂ ನಗರ ಪಂಚಾಯತ್ ಅನುದಾನದಲ್ಲಿ ಯೋಜನೆ ಅನುಷ್ಠಾನಗೊಳ್ಳುತಿದೆ ಎಂದು ಸದಸ್ಯರ ಪ್ರಶ್ನೆಗೆ ಇಂಜಿನಿಯರ್ ಉತ್ತರಿಸಿದರು.

ಲಅಧಿಕಾರಿಗಳ ಗೈರು ಹಾಜರಿಯಿಂದ ಫೆ.27ರಂದು ರದ್ದುಗೊಂಡ ನಗರ ಪಂಚಾಯತ್ ಸಭೆ ಇಂದು ಸಾಂಗವಾಗಿ ನಡೆಯಿತು. ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಯಿತು. ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬುದ್ಧನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಠ್, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಸದಸ್ಯರು ಉಪಸ್ಥಿತರಿದ್ದರು.